- ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಕಿಮ್ಸ್ ಸಂಸ್ಥೆ ಪಾಲ್ಗೊಳ್ಳಬಹುದು: ಹೈಕೋರ್ಟ್ ಆದೇಶ
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ಗೆ ಸೇರಿದ ಕೋಟ್ಯಂತರ ರು. ಬೆಲೆಬಾಳುವ ಆಸ್ತಿಯನ್ನು ಕೇವಲ ₹1,250 ಗಳ ಅಲ್ಪ ಮಾಸಿಕ ಬಾಡಿಗೆಗೆ 28 ವರ್ಷಗಳ ಅವಧಿಗೆ ''''''''ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ಮ್ಯಾನೇಜ್‌ಮೆಂಟ್ ಸ್ಟಡೀಸ್''''''''ಗೆ ಗುತ್ತಿಗೆಗೆ ನೀಡಿರುವುದು ಅಕ್ರಮ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.2015ರ ಜು.21ರಂದು ಕಂಪನಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅಫಿಶಿಯಲ್ ಲಿಕ್ವಿಡೇಟರ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ. ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿ ಈ ಆದೇಶ ನೀಡಿದೆ.
ಹರಾಜಿನಲ್ಲಿ ಪಾಲ್ಗೊಳ್ಳಬಹುದು:
ಕಿಮ್ಸ್ ಸಂಸ್ಥೆಯು ಬೇಕಿದ್ದರೆ ಈ ಸಾರ್ವಜನಿಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಆದರೆ, ಗುತ್ತಿಗೆ ಕರಾರು ಒಪ್ಪಂದವಾದ ದಿನದಿಂದ ಹಿಡಿದು ಅಧಿಕೃತ ಲಿಕ್ವಿಡೇಟರ್ ಆಸ್ತಿಯನ್ನು ವಶಕ್ಕೆ ಪಡೆಯುವವರೆಗಿನ ಅವಧಿಗೆ, ಕಿಮ್ಸ್ ತನ್ನ ಸುಪರ್ದಿಯಲ್ಲಿದ್ದ ಆಸ್ತಿಗಳಿಗೆ ಮಾರುಕಟ್ಟೆ ದರದಂತೆ ಬಾಡಿಗೆ ಪಾವತಿಸಲು ಬದ್ಧವಾಗಿದೆ. ಈ ಮಾರುಕಟ್ಟೆ ಬಾಡಿಗೆ ದರವನ್ನು ನಿಗದಿಪಡಿಸಲು ಮಾನ್ಯತೆ ಪಡೆದ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಿಸಲಾಗುವುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.ದೋಷಪೂರಿತ ನಿಲುವು:
2000ರ ಮಾ.14ರಂದು ನ್ಯಾಯಾಲಯದ ಮುಂದೆ ಕಂಪನಿಯನ್ನು ಮುಚ್ಚಲು ಅರ್ಜಿ ಸಲ್ಲಿಸುವ ಕೆಲವೇ ದಿನಗಳ ಮುನ್ನ ಈ ಗುತ್ತಿಗೆ ಕರಾರು ಮಾಡಿಕೊಳ್ಳಲಾಗಿತ್ತು. ಹೀಗಾಗಿ, ಈ ಒಪ್ಪಂದವನ್ನು ಶೂನ್ಯ ಎಂದು ಘೋಷಿಸಿ, ರದ್ದುಗೊಳಿಸಬೇಕೆಂದು ಕೋರಿ 2011ರ ಜುಲೈ 29ರಂದು ಲಿಕ್ವಿಡೇಟರ್ ಅವರು, ಕಂಪನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಸಕಾಲದಲ್ಲಿ ಸಲ್ಲಿಸಿಲ್ಲವೆಂದು ವಜಾಗೊಳಿಸಲಾಗಿತ್ತು. ಈಗ ಈ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠವು, ಕಂಪನಿ ನ್ಯಾಯಾಲಯವು ತೆಗೆದುಕೊಂಡ ನಿಲುವು ದೋಷಪೂರಿತವಾಗಿದೆ ಎಂದಿದೆ.ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠ:
ಮುಚ್ಚುವ ಹಂತದಲ್ಲಿದ್ದ ಕಂಪನಿ ಮತ್ತು ಕಿಮ್ಸ್ ನಡುವಿನ ಈ ವ್ಯವಹಾರ ನ್ಯಾಯಸಮ್ಮತವಾಗಿಲ್ಲ. ಬದಲಾಗಿ ತಮಗೆ ಸಂಬಂಧಪಟ್ಟ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದೆ. ಇದು ಕಂಪನಿ, ಅದರ ಸಾಲಗಾರರು ಹಾಗೂ ಷೇರುದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಂಪನಿ ಮುಚ್ಚುವ ಅರ್ಜಿಯನ್ನು ಸಲ್ಲಿಸುವ ಮುನ್ನವೇ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಅತ್ಯಲ್ಪ ಮೊತ್ತಕ್ಕೆ ಸಂಬಂಧಪಟ್ಟ ಸಂಸ್ಥೆಗೆ ನೀಡಲು ಪ್ರಯತ್ನಿಸಲಾಗಿದೆ ಎಂದು ಪೀಠವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.- - -
(ಬಾಕ್ಸ್) * ಕಂಪನಿ ಮುಚ್ಚಲು 2004ರ ಏ.1ರಂದು ಅಂತಿಮ ಆದೇಶ2000ರ ಜ.22ರಂದು ಮೈಸೂರು ಕಿರ್ಲೋಸ್ಕರ್‌ನ ಅಂದಿನ ಆಡಳಿತ ಮಂಡಳಿ 28 ವರ್ಷಗಳ ಅವಧಿಗೆ ಮಾಡಿಕೊಂಡ ಗುತ್ತಿಗೆ ಒಪ್ಪಂದದ ಅನ್ವಯ, ಸರ್ವೆ ನಂಬರ್ 22, 23ರ ಒಂದು ಭಾಗ ಮತ್ತು ಸರ್ವೆ ನಂ.27ರ ಒಂದು ಭಾಗ ಸೇರಿದಂತೆ ಒಟ್ಟು 6.29 ಎಕರೆ ಜಮೀನು ಹಾಗೂ ಅದರ ಮೇಲಿದ್ದ ಕಟ್ಟಡಗಳು, ಯಂತ್ರೋಪಕರಣಗಳನ್ನು ಕಿಮ್ಸ್ ವಶಕ್ಕೆ ನೀಡಲಾಗಿತ್ತು. ತದನಂತರ ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್ ಅನ್ನು ಮುಚ್ಚಲು ಕಂಪನಿ ನ್ಯಾಯಾಲಯವು 2004ರ ಏ.1ರಂದು ಅಂತಿಮ ಆದೇಶ ನೀಡಿತ್ತು.- - -