ಕಿಸಾನ್‌ ಸನ್ಮಾನ್‌ ಇ-ಕೆವೈಸಿಗೆ ಸರ್ವರ್‌ ಅಡ್ಡಿ!

KannadaprabhaNewsNetwork |  
Published : Mar 01, 2026, 02:15 AM IST
ಕಿಸಾನ್‌ ಸನ್ಮಾನ್‌ | Kannada Prabha

ಸಾರಾಂಶ

ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯದ ರೈತರು ಫ್ರೂಟ್ಸ್‌(ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಐಡಿಯಲ್ಲಿ ಸೆಂಟ್ರಲ್‌ ಐಡಿ ಸೃಷ್ಟಿಸಿಕೊಳ್ಳಲು ಅಡ್ಡಿ ಉಂಟಾಗುತ್ತಿದ್ದು ಕಾಲಾವಕಾಶ ಮೊಟಕುಗೊಳಿಸಬಾರದು ಎಂಬ ಆಗ್ರಹ ಕೇಳಿ ಬಂದಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯದ ರೈತರು ಫ್ರೂಟ್ಸ್‌(ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಐಡಿಯಲ್ಲಿ ಸೆಂಟ್ರಲ್‌ ಐಡಿ ಸೃಷ್ಟಿಸಿಕೊಳ್ಳಲು ಅಡ್ಡಿ ಉಂಟಾಗುತ್ತಿದ್ದು ಕಾಲಾವಕಾಶ ಮೊಟಕುಗೊಳಿಸಬಾರದು ಎಂಬ ಆಗ್ರಹ ಕೇಳಿ ಬಂದಿದೆ.

ರೈತರ ಭೂ ಹಿಡುವಳಿ, ಸರ್ಕಾರದಿಂದ ಪಡೆಯುವ ಪ್ರಯೋಜನ ಮತ್ತಿತರ ವಿವರಗಳನ್ನು ಒಳಗೊಂಡ ರಾಜ್ಯ ಸರ್ಕಾರದ ಫ್ರೂಟ್ಸ್‌ ಐಡಿಯಲ್ಲಿ ಕೇಂದ್ರ ಸರ್ಕಾರದ ಐಡಿಯನ್ನೂ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸದಾಗಿ ಐಡಿ ಸಂಖ್ಯೆ ಸೃಷ್ಟಿಸಬೇಕಿದ್ದು ಮೂರ್ನಾಲ್ಕು ಓಟಿಪಿಗಳು ಮೊಬೈಲ್‌ಗೆ ಬರಬೇಕಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಇದೀಗ ಅನ್ನದಾತರು ಹೈರಾಣಾಗಿದ್ದಾರೆ.

ಫೆ.26 ರೊಳಗೆ ಸೆಂಟ್ರಲ್‌ ಐಡಿ ಸೃಷ್ಟಿಸಿಕೊಳ್ಳಬೇಕು ಎಂದು ಈ ಹಿಂದೆ ಆದೇಶ ಹೊರಡಿಸಲಾಗಿದ್ದರೂ ಸದ್ಯ ಫ್ರೂಟ್ಸ್‌ ಪೋರ್ಟಲ್‌ನಲ್ಲಿ ಐಡಿ ಸೃಷ್ಟಿಸಿಕೊಳ್ಳಬಹುದಾಗಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಬಹುಪಾಲು ರೈತರು ಐಡಿ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವಾಗ ಬೇಕಾದರೂ ಈ ಆಯ್ಕೆ ರದ್ದು ಆಗಬಹುದು ಎಂದು ರೈತರು ಆತಂಕಗೊಂಡಿದ್ದು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಎಲ್ಲ ರಾಜ್ಯಗಳ ಮಾಹಿತಿ ಸಂಗ್ರಹ:

ಎಲ್ಲ ರಾಜ್ಯಗಳ ರೈತರ ಜಮೀನಿನ ವಿಸ್ತೀರ್ಣ, ಪಹಣಿ ಸಂಖ್ಯೆ, ಆಧಾರ್‌ ಸಂಖ್ಯೆ, ಮೊಬೈಲ್‌ ನಂಬರ್‌ ಮತ್ತಿತರ ಮಾಹಿತಿಗಳನ್ನು ಸೆಂಟ್ರಲ್‌ ಐಡಿ ಮೂಲಕ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಗ್ರಾಮ ಒನ್‌, ರೈತ ಸಂಪರ್ಕ ಕೇಂದ್ರ ಮತ್ತಿತರ ಕಡೆಯಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯದ ಸಹಸ್ರಾರು ರೈತರು ಇನ್ನೂ ಸೆಂಟ್ರಲ್‌ ಐಡಿ ಪಡೆದುಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸೆಂಟ್ರಲ್‌ ಐಡಿ ಸೃಷ್ಟಿಯಾದ ನಂತರ ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ವಾರ್ಷಿಕ 6 ಸಾವಿರ ರು. ಕಿಸಾನ್‌ ಸಮ್ಮಾನ್‌ ಸೇರಿದಂತೆ ಎಲ್ಲ ಪ್ರಯೋಜನಗಳಿಗೂ ಈ ಐಡಿಯನ್ನು ಉಪಯೋಗಿಸಲಾಗುತ್ತದೆ. ಬಳಿಕ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಯಾಗಲು ಇದು ಸಹಕಾರಿ.

-ಬಾಕ್ಸ್‌-

ಓಟಿಪಿಯದ್ದೇ ಸಮಸ್ಯೆ

ಸೆಂಟ್ರಲ್‌ ಐಡಿ ಸೃಷ್ಟಿಸಿಕೊಳ್ಳಲು ಮೂರ್ನಾಲ್ಕು ಓಟಿಪಿಗಳು ಮೊಬೈಲ್‌ಗೆ ಬರಬೇಕಿದ್ದು ಸರ್ವರ್‌ ಸಮಸ್ಯೆಯಿಂದಾಗಿ ಅಡ್ಡಿ ಉಂಟಾಗುತ್ತಿದೆ. ಮೊಬೈಲ್‌ ಸಂಖ್ಯೆ ನವೀಕರಣಗೊಳಿಸುವುದು, ಇ-ಕೆವೈಸಿ ಮಾಡಿಸುವುದು, ವಿದ್ಯುನ್ಮಾನ ಸಹಮತಿ ಪತ್ರಕ್ಕೆ ಒಪ್ಪಿಗೆ ನೀಡುವುದು, ಎಲ್ಲ ಜಮೀನುಗಳನ್ನು ಜೋಡಣೆ ಮಾಡುವುದಕ್ಕೆ ಪ್ರತ್ಯೇಕ ಓಟಿಪಿ ಬರಲಿದೆ. ಇದರಿಂದಾಗಿ ಹೆಚ್ಚು ಸಮಯವಾಗಲಿದ್ದು ತೊಂದರೆ ಉಂಟಾಗುತ್ತಿದೆ.

ಕೋಟ್‌....

ಸೆಂಟ್ರಲ್‌ ಐಡಿ ಸೃಷ್ಟಿಸಿಕೊಳ್ಳುವ ಸಂಬಂಧ ರಾಜ್ಯದ ರೈತರ ಮಾಹಿತಿ ಪಡೆದು ಒಂದೊಮ್ಮೆ ಕಾಲಾವಕಾಶದ ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.

-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಸ್ರೇಲ್‌-ಇರಾನ್‌ ಸಂಘರ್ಷ: ಹಲವು ವಿಮಾನ ರದ್ದು
ನಾನು ರಾಜಕೀಯ ಮಾಡಿದ್ರೆ ನೀವ್ಯಾರೂ ಇರಲ್ಲ: ಶಾಸಕ ಸುಬ್ಬಾರೆಡ್ಡಿ