ಕನ್ನಡಪ್ರಭ ವಾರ್ತೆ ಉಡುಪಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾ ಅವರು ಸೆ.2ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಜೆಪಿ ಸದಸ್ಯತ್ವವನ್ನು ಪಡೆಯುವ ಮೂಲಕ ರಾಷ್ಟ್ರಾದ್ಯಂತ ‘ಬಿಜೆಪಿ ಸದಸ್ಯತಾ ಅಭಿಯಾನ-2024’ಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಪಕ್ಷದ ಸಮಸ್ತ ಕಾರ್ಯಕರ್ತರು ಉಡುಪಿ ಜಿಲ್ಲಾದ್ಯಂತ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.ಅವರು ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸದಸ್ಯತಾ ಅಭಿಯಾನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೆ.2ರಿಂದ ಸೆ.25 ಮತ್ತು ಅ.1ರಿಂದ ಅ.15ರ ವರೆಗೆ 2 ಹಂತಗಳಲ್ಲಿ ‘ಬಿಜೆಪಿ ಸದಸ್ಯತಾ ಅಭಿಯಾನ’ ನಡೆಯಲಿದೆ. ಕಾರ್ಯಕರ್ತರು 8800002024ಕ್ಕೆ ಮಿಸ್ ಕಾಲ್ ಕೊಡುವ ಮೂಲಕ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮತ್ತು ನಮೋ ಆ್ಯಪ್ ಮೂಲಕ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ನೋಂದಣಿ ಆಗುವಂತೆ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.‘ಬಿಜೆಪಿ ಸದಸ್ಯತಾ ಅಭಿಯಾನ 2024’ರ ಸದಸ್ಯತ್ವ ಪ್ರಕ್ರಿಯೆಯ ಮಾಹಿತಿ ಪತ್ರವನ್ನು ಶಾಸಕ ಯಶ್ಪಾಲ್ ಸುವರ್ಣ ಬಿಡುಗಡೆಗೊಳಿಸಿದರು.ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿದರು.ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಟ ಮತ್ತು ಮಂಡಲಗಳ ಪದಾಧಿಕಾರಿಗಳ ಸಹಿತ ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖರು, ಮಂಡಲಗಳ ಸಂಯೋಜಕರು ಹಾಗೂ ಮಾಹಿತಿ ಕಾರ್ಯಾಗಾರದ ಅಪೇಕ್ಷಿತರು ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖ್ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.