ಕನ್ನಡಪ್ರಭ ವಾರ್ತೆ ಮೈಸೂರು
ಹೌದು, ಹಿಂದಿನ ದಿನಗಳಲ್ಲಿ ರೈತರು ಬಹುತೇಕ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದರು. ತಮ್ಮ ಮನೆಯ ಹಿತ್ತಲಿನಲ್ಲಿ ತರಕಾರಿ ಬೆಳೆಯುವುದು ತೀರಾ ಸಾಮಾನ್ಯವಾಗಿತ್ತು. ಇಂದು ಹಲವು ಕಾರಣ ಬದಲಾವಣೆಗಳಿಂದ ಕೈತೋಟಗಳು ಮಾಯವಾಗಿದೆ. ಸಕಲವನ್ನು ಮಾರುಕಟ್ಟೆಯಿಂದ ಕೊಂಡು ತಂದು ಆರೋಗ್ಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ವೃದ್ಧಿಗಾಗಿ ಪೌಷ್ಟಿಕ ಕೈತೋಟವನ್ನು ಬೆಳೆಸುವುದು ಅಗತ್ಯವಿದೆ.
ಆರೋಗಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ. ಪೌಷ್ಟಿಕ ಆಹಾರ ಸೇವನೆಯು ದೈನಂದಿನ ಚಟುವಟಿಕೆಗಳಿಗೆ ಸಮರ್ಪಕ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕಾಂಶ ಇರುವ ಆಹಾರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಜೀವಸತ್ವಗಳು, ಪ್ರೋಟೀನ್ ಗಳು, ಶರ್ಕರಪಿಷ್ಠಗಳು ಹಾಗೂ ಖನಿಜಾಂಶಗಳು ಇರಬೇಕು. ಇವುಗಳ ಪರಿಪೂರ್ಣ ದೊರೆಕುವಿಕೆಯು ಮನುಷ್ಯನ ದೇಹದ ಬೆಳವಣಿಗೆ ಹಾಗೂ ಕಾರ್ಯ ಚಟುವಟಿಕೆಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಲ್ಲದೆ, ಇವುಗಳ ಕೊರತೆ ಕೂಡ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ.ತರಕಾರಿ ಹಾಗೂ ಹಣ್ಣುಗಳಲ್ಲಿ ಪ್ರಮುಖವಾಗಿ ಈ ಎಲ್ಲಾ ಅಂಶಗಳು ದೊರೆಯುವುದರಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಾರ ದಿನ ನಿತ್ಯ ಆಹಾರ ಸೇವನೆಯಲ್ಲಿ ಸರಾಸರಿ 300 ಗ್ರಾಂ ತರಕಾರಿ ಮತ್ತು 100 ಗ್ರಾಂ ಹಣ್ಣು ಪ್ರತಿ ಮನುಷ್ಯನಿಗೆ ಪ್ರತಿ ದಿನಕ್ಕೆ ಬೇಕಾಗುತ್ತದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಒಂದು ವಾರಕ್ಕೆ ದೊರಕುವ ಪೌಷ್ಟಿಕತೆಯ ಪ್ರಮಾಣವಾಗಿದೆ. ಈ ನಿಟ್ಟಿನಲ್ಲಿ ಪೌಷ್ಟಿಕ ಕೈತೋಟ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.
ಕೈ ತೋಟ ಮಾಡಲು ತುಂಬಾ ಜಾಗ ಬೇಕಿಲ್ಲ. ಮನೆ ಮುಂದೆ ಅಥವಾ ಬಾಲ್ಕನಿ, ಟೆರೆಸ್ ನಲ್ಲಿಯೇ ಪುಟ್ಟದಾದ ತೋಟವನ್ನು ತಯಾರಿಸಬಹುದು. ಸರಾಸರಿ 5- 6 ಸದಸ್ಯರಿರುವ ಕುಟುಂಬಕ್ಕೆ ತರಕಾರಿಗಳನ್ನು ಒದಗಿಸಲು 200- 300 ಚದರ ಮೀಟರ್ ಗಳ ವಿಸ್ತೀರ್ಣದ ಸ್ಥಳ ಅವಶ್ಯಕ. ಪ್ರತಿಯೊಬ್ಬರಿಗೂ 50 ಮೀ. ಅಷ್ಟು ಸ್ಥಳದ ಅಗತ್ಯತೆ ಇರುತ್ತದೆ. ಕುಟುಂಬದ ಸದಸ್ಯರ ಸಂಖ್ಯೆಯ ಮೇಲೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈತೋಟಗಳನ್ನಾಗಿ ಯೋಚಿಸಿ ಬೆಳೆಸಬಹುದು.
15- 20 ಅಡಿ ಅಂತರದಲ್ಲಿ ಕಲ್ಲು ಕಂಬಗಳನ್ನು ನೆಟ್ಟು 3- 4 ಸಾಲುಗಳ ಮೇಲೆ ತಂತಿಯನ್ನೆಳೆದು ತೋಟದ ದಾರಿಗಳಿಗೆ ಮತ್ತು ಬದುಗಳಿಗೆ ಕಡಿಮೆ ಸ್ಥಳವನ್ನು ಉಪಯೋಗಿಸಿ ಬೆಳೆಯುವ ಬಹುವಾರ್ಷಿಕ ಗಿಡಗಳ ಮಧ್ಯದ ಜಾಗದಲ್ಲಿ ಕಡಿಮೆ ಅವಧಿ ಬೆಳೆಗಳನ್ನು ಬೆಳೆಯಬಹುದು. ಮನೆಯ ಬಳಕೆಯಲ್ಲಿ ವ್ಯರ್ಥವಾಗುವ ನೀರನ್ನು ಕಾಲುವೆ ಮೂಲಕ ಹರಿಸಿ ಸದುಪಯೋಗ ಪಡೆದುಕೊಳ್ಳಬಹುದು.
ಬದುಗಳನ್ನು ಗೆಡ್ಡೆ ತರಕಾರಿಗಳ ಬೇಸಾಯಕ್ಕೆ ಉಪಯೋಗಿಸಿ. ಯಾವ ಬೆಳೆಗಳನ್ನು ಯಾವ ಕಾಲದಲ್ಲಿ ಹಾಕಬೇಕು ಎನ್ನುವುದನ್ನು ನಿರ್ಧರಿಸಿ ಬೆಳೆಯಬೇಕು. ಒಂದೆರೆಡು ಕಾಂಪೋಸ್ಟ್ ಗುಂಡಿಗಳನ್ನು ತೋಟದಲ್ಲಿ ನೆರಳಿರುವ ಕಡೆ ತೋಡಿಸಿ ತೋಟದ ಹಾಗೂ ಮನೆಯ ತ್ಯಾಜ್ಯ ವ್ಯರ್ಥ ವಸ್ತುಗಳನ್ನೆಲ್ಲಾ ಸಂಗ್ರಹಿಸಿ ಸಸಿ ಮಡಿಗೆ ಹಾಗೂ ತೋಟಕ್ಕೆ ಬೇಕಾದ ಕಾಂಪೋಸ್ಟ್ ತಯಾರಿಸಿಕೊಳ್ಳಬೇಕು. ಹೀಗೆ ತಯಾರಿಸಿದ ಗೊಬ್ಬರವನ್ನು ಪ್ರತಿ 100 ಚ. ಅಡಿಗೆ 100 ಕೆ.ಜಿ. ಯಂತೆ ಸೇರಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎನ್ನುತ್ತಾರೆ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್.
ಕೋಟ್...
----
- ರಾಹುಲ್ ದಾಸ್, ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ, ಮೈಸೂರು