ಕನ್ನಡಪ್ರಭ ವಾರ್ತೆ ಅಥಣಿ
ಬಣ್ಣ ಬಣ್ಣದ, ವಿವಿಧ ವಿನ್ಯಾಸ, ಆಕೃತಿಗಳ ಚಿತ್ತಾಕರ್ಷಕ ಗಾಳಿಪಟಗಳು ಬಾನಂಗಳದಲಿ ಹಾರಾಡುತ್ತಿದ್ದರೆ ಜನಸಮೂಹ ಈ ದೃಶ್ಯಗಳನ್ನು ಕಣ್ತುಂಬಿಕೊಂಡರೆ, ಶಾಲಾ ಕಾಲೇಜು ಮಕ್ಕಳು, ಯುವಕರು, ಯುವತಿಯರು ಗಾಳಿಪಟಕ್ಕೆ ಸೂತ್ರ ಕಟ್ಟಿಕೊಂಡು ಆಗಸದಲ್ಲಿ ಹಾರಿಸಿ ಸಂಭ್ರಮಿಸಿದರು.ಭಾನುವಾರ ಮಧ್ಯಾಹ್ನ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ನಿಮಿತ್ತ ಪ್ರಥಮ ಬಾರಿಗೆ ರೋಟರಿ ಸಂಸ್ಥೆ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಇಂದಿನ ಮಕ್ಕಳು ಟಿವಿ ಮತ್ತು ಮೊಬೈಲ್ ಗಳಲ್ಲಿ ಸಮಯ ಕಳೆಯುತ್ತಿದ್ದು, ನಮ್ಮ ದೇಸಿ, ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿ ಬಣ್ಣ ಬಣ್ಣದ ಗಾಳಿಪಟಗಳನ್ನು ಆಕಾಶದಲ್ಲಿ ಹಾರಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.ವಿವಿಧ ಆಕೃತಿಯ ಗಾಳಿಪಟಗಳು: ಈ ಗಾಳಿಪಟದ ಉತ್ಸವದಲ್ಲಿ ಒಂದೇ ದಾರದಲ್ಲಿ 110 ಗಾಳಿಪಟಗಳು, ರುಕಾಕೋ (ಜಪಾನ್ ಮಾದರಿ ), ಅಮೆರಿಕನ್ ಡೆಲ್ಟಾ, ಇನಪ್ಲೇಟೆಬಲ್ ಕೈಟ್, ಪೈಲೆಟ್ ಕೈಟ್, ಫಿಶ್, ಅಕ್ಟೋಪಸ್, ಕಿಂಗ್ ಕೋಬ್ರಾ, , ಬಟರಫ್ಲೈ, ಕಾಂತಾರಾ, ಯಕ್ಷಗಾನ, ಪ್ಯಾರಾಚೂಟ್ ಸೇರಿದಂತೆ ವಿವಿಧ ವಿನ್ಯಾಸದ ಗಾಳಿಪಟಳು ಪ್ರೇಕ್ಷಕರನ್ನು ರಂಜಿಸಿದವು.
####18 ದೇಶಗಳ ಉತ್ಸವದಲ್ಲಿ ಭಾಗಿ:
ಬೆಳಗಾವಿಯಿಂದ ಆಗಮಿಸಿದ ಗಾಳಿಪಟ ತರಬೇತಿದಾರ ಸಂದೇಶ ಕಡ್ಡಿ ಕನ್ನಡಪ್ರಭದೊಂದಿಗೆ ಮಾತನಾಡಿ, ಚೀನಾ, ಮಲೇಷ್ಯಾ, ವಿಯೆಟ್ನಾಂ ಸಿಂಗಾಪುರ, ದುಬೈ, ಯುಎಸ್ ಎ ಮಾರಿಷಸ್ ಸೇರಿದಂತೆ ಸುಮಾರು 18 ದೇಶಗಳಲ್ಲಿ ಪಾಲ್ಗೊಂಡ ಅನುಭವ ನಮಗಿದೆ. ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆಗಳಲ್ಲಿ ಭಾಗವಹಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಭಿನಂದನಾ ಪತ್ರ ಪಡೆದುಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡರು. ಇವರ ಜತೆಗೆ ಪ್ರಸನ್ನ, ಶ್ರೀನಾಥ್, ಮುನಿರಾಜು, ಮಂಜುನಾಥ್ ಇತರ ಸ್ನೇಹಿತರು, ಗಾಳಿಪಟ ಕಲಾ ಸಂಘ ದೊಡ್ಡ ಬಳ್ಳಾಪುರ ಇತರರು ಪಟಗಳನ್ನು ಹಾರಿಸಿದರು.ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ: ವೇದಿಕೆ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ಮೊಬೈಲ್ ಹಾವಳಿಯಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯಿಂದ ಪ್ರಥಮ ಬಾರಿಗೆ ಹೊಸ ಪ್ರಯೋಗ ಮಾಡಿದ್ದೇವೆ. ಈ ಉತ್ಸವದಲ್ಲಿ 1100 ಕ್ಕೂ ಅಧಿಕ ವಿದ್ಯಾರ್ಥಿಗಳು ಹೆಸರು ನೋಂದಾಯಿಸುವ ಮೂಲಕ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ ಸೌದಾಗರ, ಡಾ.ಪಿ.ಪಿ. ಮಿರಜ್ ಮಾತನಾಡಿದರು. ಅರುಣ ಯಲಗುದ್ರಿ, ಭರತ ಸೋಮಯ್ಯ, ಪ್ರಫುಲ್ ಪಡನಾಡ, ಅನೀಲ ದೇಶಪಾಂಡೆ, ಪ್ರಶಾಂತ ಗೌರಾಣಿ, ಶ್ರೀಕಾಂತ ಅಥಣಿ, ಡಿ.ಡಿ. ಮೇಕನಮರಡಿ, ಡಾ.ಆನಂದ ಕುಲಕರ್ಣಿ, ಸಚಿನ್ ದೇಸಾಯಿ, ಲಲಿತ ಮೇಕನಮರಡಿ ಸೇರಿದಂತೆ ರೋಟರಿ ಸಂಸ್ಥೆ, ಇನ್ನರ್ ವ್ಹಿಲ್ ನ ಸದಸ್ಯರು ಇದ್ದರು.