ಗದಗ: ಸಹಕಾರ ಕ್ಷೇತ್ರವು ಇಂದು ತನ್ನ ಕ್ಷೇತ್ರ ವಿಸ್ತಾರ ಮಾಡಿಕೊಳ್ಳದ ಕಾರಣ ಕಾರ್ಪೋರೇಟ್ ಸಂಸ್ಥೆಗಳು, ಅನಧೀಕೃತ ಫೈನಾನ್ಸ್ ಕಂಪನಿಗಳು ಬೃಹದಾಕಾರವಾಗಿ ಬೆಳೆಯುತ್ತಿರುವ ಪರಿಣಾಮ ದೇಶದ ಮತ್ತು ರಾಜ್ಯದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮೈಕ್ರೋ ಫೈನಾನ್ಸ್‌ಗಳು ಇಂದು ಜನರನ್ನು ಹಿಡಿದು,ಹೊಡೆದು ಸಾಲ ವಸೂಲಿ ಮಾಡುವುದು, ಬಂದೂಕು ಹಿಡಿದು ಬೆದರಿಕೆ ಹಾಕುವುದು ಮಾಡುತ್ತಿರುವುದರಿಂದ ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ಖೇದಕರ ವಿಷಯವಾಗಿದೆ. ಆದ್ದರಿಂದಲೇ ಜೋರು ಮಾಡಿ ಹಣ ವಸೂಲಿ ಮಾಡುವವರಿಗೆ, ಅಮಾನವೀಯವಾಗಿ ಹಣ ವಸೂಲಿ ಮಾಡುವವರಿಗೆ ಅಂಕುಶದ ಜತೆಗೆ ಮಟ್ಟ ಹಾಕಲು ಸರಕಾರ ಕಾನೂನು ತರಲು ಚಿಂತನೆ ನಡೆಸಿದೆ ಎಂದರು.
ಇಂದಿನ ದಿನಮಾನದಲ್ಲಿ ಸಹಕಾರ ಕ್ಷೇತ್ರದಲ್ಲಿ ಲಾಭವಿಲ್ಲದ ಕಾರಣ ಯುವಜನತೆ ಸಹಕಾರ ಕ್ಷೇತ್ರದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಿರಿಯರೆಲ್ಲರೂ ಸೇವೆಗೆ ಕೀರ್ತಿ ಅಪೇಕ್ಷೆ ಮಾಡುತ್ತಿದ್ದ ಪರಿಣಾಮ ದೊಡ್ಡಮನುಷ್ಯರಾಗುತ್ತಿದ್ದರು. ಆದರೆ, ಇಂದು ಪ್ರತಿಯೊಬ್ಬರೂ ಸೇವೆಗೆ ಕೀರ್ತಿ ಅಪೇಕ್ಷೆ ಮಾಡದೆ ಲಾಭ ನಿರೀಕ್ಷಿಸುತ್ತಿದ್ದಾರೆ. ಅದರ ಪರಿಣಾಮ ಸಹಕಾರ ಕ್ಷೇತ್ರದ ತನ್ನ ವ್ಯಾಪ್ತಿ ಕ್ಷೀಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.ದೇಶದ ಇತಿಹಾಸ ಮೆಲುಕು ಹಾಕಿದಾಗ ಶಾಸಕರಾದವರು, ರಾಜ್ಯದ ನಾಯಕರಾದವರು ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆ, ಟೆಕ್ಸಟೈಲ್ ಮಿಲ್, ಪ್ರೊಸೆಸ್ಸಿಂಗ್ ಯುನಿಟ್, ಸಕ್ಕರೆ ಕಾರ್ಖಾನೆ, ಖಾದಿ ಗ್ರಾಮೋದ್ಯೋಗ ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡಿದ್ದರು. ಆದರೆ, ಕಳೆದ 25 ವರ್ಷಗಳಿಂದ ಇತ್ತೀಚೆಗೆ ಸಹಕಾರಿ ಕ್ಷೇತ್ರದ ಆಸ್ತಿ ಪಡೆದುಕೊಂಡು ಖಾಸಗಿ ಮಾಡಿಕೊಂಡು ಸರ್ಕಾರದ ಸವಲತ್ತು ಪಡೆದುಕೊಂಡವರು ರಾಜಕೀಯ ನಾಯಕತ್ವ ಪಡೆದುಕೊಳ್ಳುತ್ತಿದ್ದಾರೆ. ಈ ವ್ಯತ್ಯಾಸದಿಂದ ಯುವಕರು ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಂಡು ಕೇವಲ ಲಾಭದ ಉದ್ದೇಶಕ್ಕಾಗಿ ಗಮನ ಹರಿಸುತ್ತಿರುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದಗ ಸಹಕಾರಿ ರಂಗದ ತೊಟ್ಟಿಲು. ಈ ತೊಟ್ಟಿಲಿನಿಂದ ಬೆಳೆದು, ಸಹಕಾರಿ ರಂಗ ಬೆಳೆದವರನ್ನು ಸನ್ಮಾನಿಸುವುದು ಒಂದು ಖುಷಿಯ ಸಂಗತಿಯಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಏಕನಾಥ ನಾಗನೂರ, ಬಸು ತಿರ್ಲಾಪೂರ, ಮೋಹನ ದುರಗಣ್ಣವರ, ಪ್ರಭು ದಂಡಾವತಿಮಠ, ಶಶಿ ಪಾಟೀಲ, ಪ್ರಕಾಶ ಬೊಮ್ಮನಹಳ್ಳಿ, ರಂಗನಗೌಡ ಓದುಗೌಡರ, ಎಂ.ಆರ್. ಪಾಟೀಲ, ಬಸಲಿಂಗಪ್ಪ ಮುಂಡರಗಿ ಸೇರಿದಂತೆ ಅನೇಕರು ಇದ್ದರು.
ಜನರ ಕಲ್ಯಾಣಕ್ಕಾಗಿ ಸಹಕಾರ ಕ್ಷೇತ್ರ ವಿಸ್ತರಿಸುವಲ್ಲಿ ಸಹಕಾರಿಗಳು ಧೈರ್ಯದಿಂದ ಹೊಸ ವಾತಾವರಣ ನಿರ್ಮಿಸಬೇಕಿದೆ.ಯಾರಿಗೆ ಹಣಕಾಸಿನ ಅವಶ್ಯವಿದೆ, ಅಗತ್ಯವಿದ್ದವರನ್ನು ಹುಡುಕಿಕೊಂಡು ಸಾಲ ಕೊಡುವಂತಾಗಲು ಸಹಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.