- ಶಾಸಕ ಶಾಂತನಗೌಡ ವಿಷಾದ । ತಾಲೂಕು ಕಚೇರಿಯಲ್ಲಿ ವೀರರಾಣಿ ಚನ್ನಮ್ಮ ಜಯಂತಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಸ್ತುತ ದಿನಗಳಲ್ಲಿ ಜಾತಿಗೊಂದು ಮಠ, ಗುರುಗಳು ಆಗುವ ಮೂಲಕ ಸಮಾಜದಲ್ಲಿ ಸೌಹಾರ್ದ ವಾತಾವಣ ಕಡಿಮೆಯಾಗುತ್ತಿದೆ. ಜನರಲ್ಲಿ ಸ್ವಾರ್ಥ ಗುಣವೇ ಹೆಚ್ಚಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಇತಿಹಾಸದಲ್ಲಿ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ಅವರಿಗೆ ಪಾಠ ಕಲಿಸಿದ ಹಾಗೂ ವೀರತ್ವ, ಸ್ವಾಭಿಮಾನದ ಮಹಿಳೆ ಎಂದರೆ ಕಿತ್ತೂರು ರಾಣಿ ಚನ್ನಮ್ಮ ಎಂದು ಹೇಳಿದರು.
ಈ ಸಂದರ್ಭ ಪಂಚಮಸಾಲಿ ಸಮಾಜದ ಮುಖಂಡರು ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರಿಡಲು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು, ಹೊನ್ನಾಳಿ ತುಂಗಭದ್ರಾ ಸೇತುವೆ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಸುಂದರವಾದ ಉದ್ಯಾನವನ ನಿರ್ಮಿಸುವ ಬಗ್ಗೆ ಭರವಸೆ ನೀಡಿದರು.
ಶಿಕ್ಷಕ ಗಿರೀಶ್ ನಾಡಿಗ್ ಕಿತ್ತೂರು ರಾಣಿ ಚನ್ನಮ್ಮ ಕುರಿತು ಉಪನ್ಯಾಸ ನೀಡಿದರು. ಕಂದಾಯ ಇಲಾಖೆ ನೌಕರ ಬೀರೇಶ್ ಸ್ವಾಗತಿಸಿದರು. ಹಾಲೇಶ್ ವಂದಿಸಿದರು. ಬನಶಂಕರಿ, ಹರೀಶ್, ರಾಜು ಕೋಟೆಮಲ್ಲೂರು, ಕೆ,ಸಿ. ಕವಿತಾ, ಹಾಲಮ್ಮ, ಗಿರಿಜಮ್ಮ, ಗಿರೀಶ್, ಪ್ರಶಾಂತ್ ಮುಂತಾದವರು ಇದ್ದರು.
-23ಎಚ್.ಎಲ್.ಐ1: