- ಸಂಸ್ಥೆಯ ಮುಖ್ಯಸ್ಥ ಎನ್.ವೀರಭದ್ರಪ್ಪ ಅವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ
ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಜನ ಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರು ಜೆ.ಸಿ.ರಸ್ತೆ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಸಂಸ್ಥೆ ಮುಖ್ಯಸ್ಥ ಯುವ ಪ್ರಶಸ್ತಿ ಪುರಸ್ಕೃತ ಎನ್.ವೀರಭದ್ರಪ್ಪ ಅವರಿಗೆ ಸಂಸ್ಥೆ ಪರವಾಗಿ ಕಿತ್ತೂರು ರಾಣಿ ಚೆನ್ಮಮ್ಮ ಪ್ರತಿಷ್ಠಿತ ಪ್ರಶಸ್ತಿ ವಿತರಿಸಿ ಗೌರವಿಸಲಾಗಿದೆ.ಸವಾಲಾಗಿ ಸ್ವೀಕರಿಸಿ ಯಶಸ್ವಿಯಾದ ಸಂಸ್ಥೆಃ ಮಹಿಳೆಯರ ಸಬಲೀಕರಣ, ಮಹಿಳೆಯರ ಸ್ವಾವಲಂಬನೆ, ಶಿಕ್ಷಣ, ಆರೋಗ್ಯ, ಅರ್ಥಿಕ ಸದೃಢತೆ, ಮಹಿಳಯರ ಮೇಲೆ ನಡೆಯುವ ದೌರ್ಜನ್ಯ ಅತ್ಯಾಚಾರ ತಡೆಗಟ್ಟುವಿಕೆ. ಸಂತ್ರಸ್ಥ ಮಹಿಳೆಯರಿಗೆ ಸಾಂತ್ವನ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಿ, ಕೌಟುಂಬಿಕ ಕಲಹಗಳಿಂದ ದೂರವೇ ಇದ್ದ ಕುಟುಂಬ ದವರೊಡನೆ ರಾಜಿ ಸಂಧಾನ ನಡೆಸಿ, ತಜ್ಞರಿಂದ ಸಲಹೆ ಸಹಕಾರ ನೀಡಿ ಮಹಿಳೆಯರನ್ನು ಪುನಃ ಸಮಾಜದ ಮುಖ್ಯ ವಾಹಿನಿಗೆ ತರಲು ಈ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಸಂತ್ರಸ್ಥ ಮಹಿಳೆಯರ ಸುಖ ಸಂಸಾರಕ್ಕೆಭರವಸೆ ಬೆಳಕಾಗಿ ತರೀಕೆರೆ ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಲೆಮರೆ ಕಾಯಿಯಂತೆ ಶ್ರಮಿಸುವಲ್ಲಿ ಯಶಸ್ವಿಯಾಗಿದೆ.
ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ದೃಷ್ಠಿಯಿಂದ ಸಮಾನ ಮನಸ್ಕ ಯುವಜನರು ಸೇರಿ ತರೀಕೆರೆ ಪಟ್ಚಣದಲ್ಲಿ 1995-96ನೇ ಸಾಲಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿ ಮಹಿಳೆಯರ ಮತ್ತು ಮಕ್ಕಳ, ಯುವಜನರ, ರೈತರ, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಪಣತೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವಿರತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಹಲವಾರು ಯೋಜನೆಗಳನ್ನು ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಜಾಗೃತಿ-ಜಾಥಾಗಳ ಮೂಲಕ ಮಹಿಳೆಯರು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುತ್ತಾ ಬರಲಾಗಿದೆ.ಅನುಷ್ಠಾನಗೊಳಿಸಿದ ಯೋಜನೆಗಳುಃ ಮಹಿಳೆಯರ ಸಾಮಾಜಿಕ ಭದ್ರತೆ ಉದ್ದೇಶವಾಗಿಟ್ಟುಕೊಂಡು ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಿಂದ ಪ್ರಾರಂಭಿಸಿದ ಸಾಂತ್ವನ ಯೋಜನೆ ಮಹಿಳಾ ಸಹಾಯವಾಣಿ ಕೇಂದ್ರದ ಮೂಲಕ ಕೌಟುಂಬಿಕ ಕಲಹ, ದೈಹಿಕ ಮತ್ತು ಮಾನಸಿಕ ಕಿರುಕುಳ, ಲೈಂಗಿಕ ಕಿರುಕುಳ, ಬಹುಪತ್ನಿತ್ವ, ವರದಕ್ಷಿಣೆ
ಕಿರುಕುಳ, ಅತ್ಯಾಚಾರ ಮತ್ತು ಅನೈತಿಕ ಸಂಬಂಧ ಸೇರಿದಂತೆ ಸಾವಿರಾರು ಪ್ರಕರಣಗಳನ್ನು ದಾಖಲು ಮಾಡಿಕೊಂಡು ಸೌಹಾರ್ದತೆ ಮತ್ತು ಶಾಂತಿಯುತವಾಗಿ ಇತ್ಯರ್ಥಪಡಿಸಿದೆ. ಕಾನೂನಿಗೆ ಸಂಬಂಧಿಸಿದ ತೊಡಕಿನ ಪ್ರಕರಣಗಳನ್ನು ಡಿ.ವಿ.ಅಕ್ಟ್. ಗೆ ವರ್ಗಾಯಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗಿದೆ.ಮಹಿಳೆಯರ ಅರ್ಥಿಕ ಸ್ವಾವಲಂಬನೆಗೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ರಚನೆ, ಮಹಿಳೆಯರಿಗೆ ಸಾಮಾಜಿಕ ಹಾಗೂ ಉದ್ಯಮ ಶೀಲತೆ ಕುರಿತು ಜಾಗೃತಿ ಹಾಗೂ ತರಬೇತಿ, ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆ ಮತ್ತು ಸ್ವಉದ್ಯೋಗ ಕೈಗೊಳ್ಳಲು ತರಬೇತಿಗಳು, ಮಹಿಳೆಯರ ಆರೋಗ್ಯ ಜಾಗೃತಿ ಮತ್ತು ಪರಿಸರ ಜಾಗೃತಿ, ರೈತ ಮಹಿಳೆಯರಿಗೆ ವಿಶೇಷ ತರಬೇತಿ ಹಾಗೂ ನಿರಂತರವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಳನ್ನು ಸಂಸ್ಥೆ ಸಂಘಟಿಸುತ್ತಾ ಬಂದಿದೆ.ಸಂತೋಷ ತಂದಿದೆಃ ಕಳೆದ 30 ವರ್ಷಗಳಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಸಂಸ್ಥೆ ನಿರ್ವಹಿಸಿದ ಕೆಲಸ ವನ್ನು ಸರ್ಕಾರ ಗುರುತಿಸಿ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ತರೀಕೆರೆ ತಾಲೂಕಿಗೆ ಸಂದ ಗೌರವ. ಪ್ರಶಸ್ತಿಯಿಂದ ಇನ್ನೂ ಹೆಚ್ಚು ಕಾರ್ಯ ನಿರ್ವಹಿಸಲು ಸ್ಪೂರ್ತಿ ನೀಡಿದೆ. ಪ್ರಶಸ್ತಿ ಸಂತೋಷ ತಂದಿದೆ ಎಂದು ಸಂಸ್ಥೆ ಮುಖ್ಯಸ್ಥ ಎನ್.ವೀರಭದ್ರಪ್ಪ ತಿಳಿಸಿದ್ದಾರೆ.17ಕೆಟಿಆರ್.ಕೆ.4ಃ
ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಟ್ಟಣದ ಜನಚಿಂತನ ಪಟ್ಟಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಮುಖ್ಯಸ್ಥ ಎನ್.ವೀರಭದ್ರಪ್ಪ ಅವರಿಗೆ ಸಂಸ್ಥೆ ಪರವಾಗಿ ಕಿತ್ತೂರು ರಾಣಿ ಚೆನ್ನಮ್ಮಪ್ರಶಸ್ತಿ ಪ್ರಧಾನ ಮಾಡಿ ಗೌರವಿಸ ಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಇದ್ದರು.--------------------