ಕೆಎಲ್‌ಇ ಸಂಸ್ಥೆಯು ಸರ್ವ ಜನಾಂಗದ ಶಿಕ್ಷಣ ತೋಟ ಮತ್ತು ಸಂಪತ್ತಾಗಿದೆ-ಸಾಹಿತಿ ಶಿಡ್ಲಾಪುರ

KannadaprabhaNewsNetwork |  
Published : Nov 15, 2024, 12:36 AM IST
ಫೋಟೊ ಶೀರ್ಷಿಕೆ: 14ಹೆಚ್‌ವಿಆರ್7 ಹಾವೇರಿ ನಗರದ ಜಿ.ಎಚ್.ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿದರು.  | Kannada Prabha

ಸಾರಾಂಶ

ಜನಾಂಗದ ಶಿಕ್ಷಣ ತೋಟ ಮತ್ತು ಸಂಪತ್ತಾಗಿದ್ದು ಇದನ್ನು ಕಟ್ಟಿ ಬೆಳೆಸಿದ ಸಪ್ತರ್ಷಿಗಳು ಪ್ರಾಥಃಸ್ಮರಣೀಯರಾಗಿದ್ದಾರೆಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಹೇಳಿದರು.

ಹಾವೇರಿ: ಅಕ್ಷರ ದಾಸೋಹದ ಮೂಲಕ ಶಿಕ್ಷಣಕ್ರಾಂತಿ ಮಾಡಿದ ಕೆಎಲ್‌ಇ ಸಂಸ್ಥೆಯು ಕ್ಷೀರಸಾಗರದಂತೆ ಅಕ್ಷಯದ ಜ್ಞಾನಮಂಡಲ ನಿರ್ಮಾಣ ಮಾಡಿ ನಿರಂತರ ದಾಸೋಹ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆಯು ಸರ್ವ ಜನಾಂಗದ ಶಿಕ್ಷಣ ತೋಟ ಮತ್ತು ಸಂಪತ್ತಾಗಿದ್ದು ಇದನ್ನು ಕಟ್ಟಿ ಬೆಳೆಸಿದ ಸಪ್ತರ್ಷಿಗಳು ಪ್ರಾಥಃಸ್ಮರಣೀಯರಾಗಿದ್ದಾರೆಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಹೇಳಿದರು.

ನಗರದ ಜಿ.ಎಚ್.ಪದವಿ ಮಹಾವಿದ್ಯಾಲಯದ, ಪ.ಪೂ. ಮಹಾವಿದ್ಯಾಲಯ, ಬಿಸಿಎ, ವಾಣಿಜ್ಯ ಸ್ನಾತಕೋತ್ತರ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ್ದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಬೆಳಗಾವಿಯಲ್ಲಿ ಪುಟ್ಟ ಪ್ರಾಥಮಿಕ ಶಾಲೆಯಿಂದ ಆರಂಭವಾದ ಸಂಸ್ಥೆ, ಉನ್ನತ ಶಿಕ್ಷಣವೂ ಸೇರಿ ಆರೋಗ್ಯ ಕ್ಷೇತ್ರದಲ್ಲಿಯೂ ಅದ್ವಿತೀಯವಾದ ಸಾಧನೆ ಮಾಡಿದೆ. ಸ್ವಾರ್ಥವಿಲ್ಲದೆ ಶಿಕ್ಷಣಕ್ಕಾಗಿ ಪರಿಶ್ರಮಿಸಿದ ಸಪ್ತರ್ಷಿಗಳ ಹಾಗೂ ದಾನ ಸಲ್ಲಿಸಿದವರ ಪರಿಶ್ರಮ ಸಾರ್ಥಕವಾಗಿದೆ. ಅತ್ಯಂತ ಕಷ್ಟದ ದಿನಗಳಲ್ಲಿ ನೋವು ನುಂಗಿ, ನಲಿವು ಕೊಟ್ಟ ಅವರ ನಡೆ ನಾಡಿಗೆ ಮಾದರಿಯಾದುದು. ಮಾನವೀಯತೆಯ ವಿಕಾಸವೇ ಶಿಕ್ಷಣ ಎಂದರಿತು ಅದನ್ನು ನಾಡ ಮಕ್ಕಳಿಗೆ ನೀಡಿದ ಹೆಮ್ಮೆ ಅವರದಾಗಿದೆ. ಇವರು ಪ್ರಶಸ್ತಿ ಪ್ರಶಂಸೆ ಕಡೆಗೆ ನೋಡಿದವರಲ್ಲ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಪ್ರಸಾರ ಕಾಯಕ ಕೈಗೊಂಡು ಪ್ರಗತಿಗೆ ಹೆಗಲು ಕೊಟ್ಟಿದ್ದು ಇತಿಹಾಸವೇ ಆಗಿದೆ. ಅಕ್ಷರ ಕ್ರಾಂತಿಯನ್ನೇ ಮಾಡಿದ ಕೆಎಲ್‌ಇ ಸಂಸ್ಥೆಯು ಪ್ರಸ್ತುತ ಡಾ. ಪ್ರಭಾಕರ ಕೋರೆಯವರ ಸಾರಥ್ಯದಲ್ಲಿ ದೇಶ-ವಿದೇಶದಲ್ಲಿಯೂ ಸಹ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಜ್ಞಾನ ದಾಸೋಹಕ್ಕೆ ಮುಂದಾಗಿದೆ. ಇದು ಕನ್ನಡಿಗರ ಹೆಮ್ಮೆ ಎಂದರು.ಪರೋಪಕಾರಕ್ಕಾಗಿಯೇ ಬದುಕನ್ನು ಪರಿಶ್ರಮಿಸಿ, ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದನ್ನು ಸಂಸ್ಥೆಯ ಸ್ಥಾಪನೆ ಮಾಡುವ ಮೂಲಕ ಸಾಬೀತು ಮಾಡಿದ್ದಾರೆ. ವೀರಶೈವ ಮಠ ಮಾನ್ಯಗಳು ಧರ್ಮ ಬೋಧನೆಯ ಜೊತೆಗೆ ಭಾರತೀಯ ಪರಂಪರೆ, ಸನಾತನ ಸಂಸ್ಕಾರವನ್ನು ಶೈಕ್ಷಣಿಕವಾಗಿ ನಾಡಿಗರಿಗೆ ತಲುಪಿಸಿ ಯಶಸ್ಸು ಕಂಡಿವೆ. ಅದೇ ಸರದಿಯಲ್ಲಿ ಕೆಎಲ್‌ಇ ಸಂಸ್ಥೆಯೂ ಸಹ ಹೆಜ್ಜೆ ಇಟ್ಟು ಇಂದು ವ್ಯಾಪಕವಾಗಿ ಬೆಳೆದಿರುವುದು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಇದು ಸ್ಮರಣೀಯ ಮತ್ತು ಮಾದರಿ ಕಾರ್ಯವಾಗಿದೆ. ಈ ಸಂಸ್ಥೆಯಿಂದ ಮತ್ತಷ್ಟು ಹೆಚ್ಚಿನ ಕೊಡುಗೆ ಸಮಾಜಕ್ಕೆ ಪ್ರಾಪ್ತವಾಗಲಿ ಎಂದು ಆಶೀಸಿದರು. ಅಧ್ಯಕ್ಷತೆ ವಹಿಸಿದ್ದ ಜಿ. ಎಚ್. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ. ಎಸ್. ಎಲ್. ಬಾಲೇಹೊಸೂರು ಮಾತನಾಡಿ, ಕೆಎಲ್‌ಇ ಸಂಸ್ಥೆಯ ಸ್ಥಾಪಕರಾದ ಸಪ್ತ ಋಷಿಗಳ ಒಂದು ಸಂಕಲ್ಪ ಸಮಾಜಕ್ಕೆ, ನಾಡಿಗೆ ಶಿಕ್ಷಣವನ್ನು ಕೊಡುವುದು. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಹಗಲಿರಳು ಶ್ರಮಿಸುವುದೇ ಆಗಿತ್ತು. ಅದನ್ನು ಇಂದು ಸಂಪೂರ್ಣವಾಗಿ ನಾವುಗಳು ನೋಡುತ್ತಿದ್ದೇವೆ. ತ್ಯಾಗ, ನಿಸ್ವಾರ್ಥ ಸೇವೆಯ ಮೂಲಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪ್ರಯಾಣ ಇಂದು ನೆನ್ನೆಯದಲ್ಲ ಇದು ಶತಮಾನದ ಹೆದ್ದಾರಿಯಾಗಿದೆ ಎಂದರು. ಸುವರ್ಣ ಶೀಲವಂತರ, ಸುಕನ್ಯ ಪ್ರಾರ್ಥಿಸಿದರು. ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಡಿ. ಎ. ಕೊಲ್ಲಾಪುರೆ ಪರಿಚಯಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರ್ವಹಿಸಿದರು. ಪಪೂ. ಪ್ರಾಚಾರ್ಯ ಡಾ. ಜ್ಯೋತಿಬಾ ಆರ್. ಶಿಂಧೆ ವಂದಿಸಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆಯ ಕಾರ್ಯಾಧ್ಯಕ್ಷೆ ಪ್ರೊ. ಗೀತಾ ಮಂಕಣಿ, ಬಿಸಿಎ ಸಂಯೋಜಕ ಪ್ರೊ. ವೆಂಕಟೇಶ ಕಲಾಲ ಇತರರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''