ಸ್ವಾತಂತ್ರ ಪೂರ್ವದ ಶಾಲೆಯ ಕಟ್ಟಡ ಬೀಳುವ ಸ್ಥಿತಿ ತಲುಪಿದೆಬೀರೂರು ಎನ್.ಗಿರೀಶ್
ಕನ್ನಡಪ್ರಭ ವಾರ್ತೆ, ಬೀರೂರು.ಅನೇಕ ಗಣ್ಯರನ್ನು ಈ ನಾಡಿಗೆ ಪರಿಚಯಿಸಿರುವ ಕೀರ್ತಿಹೊತ್ತ ಶಾಲೆ ಅವಸಾನದಂಚಿಗೆ ತಲುಪಿದೆ.
ಬೀರೂರು ಪಟ್ಟಣದ ಕೆ.ಎಲ್.ಕೆ.ಪ್ರೌಢಶಾಲೆಯೇ ನಿರ್ಲಕ್ಷ್ಯಕ್ಕೆ ಒಳಗಾದ ಶಾಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರೌಢಶಾಲಾ ವ್ಯಾಸಾಂಗಕ್ಕೆ ಅವಕಾಶವಿತ್ತು. ಅದರಂತೆ ಮೈಸೂರು ರಾಜ್ಯವಾಗಿದ್ದ ಸಂದರ್ಭದಲ್ಲಿ ಕಡೂರು ಜಿಲ್ಲಾ ಕೇಂದ್ರ ವಾಗಿತ್ತು. 1942ರ ಜುಲೈ 31ರಂದು ಅಂದಿನ ಶಿಕ್ಷಣ ಸಚಿವ ಜೆ.ಮೊಹಮ್ಮದ್ ಇಮಾಮ್ ಈ ಶಾಲೆ ಉದ್ಘಾಟಿಸಿ ದ್ದರು.ನಂತರ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಶಿಕ್ಷಣದ ಮೂಲಕವೇ ಜ್ಞಾನದ ಕಿಚ್ಚು ಹಚ್ಚಿಸಬೇಕು ಎಂದು ಬೀರೂರು ಪಟ್ಟಣದ ಕರುಗಲ್ ಬೀದಿಯ ಖರೀದಿ ಕುಟುಂಬದವರು ಖರೀದಿ ಲಿಂಗಪ್ಪ ಕಮಲಾಕ್ಷಮ್ಮ ನೆನಪಿನಲ್ಲಿ ಈ ಕೆ.ಎಲ್.ಕೆ.ಪ್ರೌಢಶಾಲೆ ಆರಂಭಿಸಿ ಇಂದಿಗೆ 8 ದಶಕಗಳಾಗಿವೆ. ಈ ಪ್ರೌಢಶಾಲೆಯಲ್ಲಿ ಕಡೂರು, ಬೀರೂರು, ತರೀಕೆರೆ ಮತ್ತಿತರ ಭಾಗದಿಂದ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು, ರಾಜಕಾರಣಿಗಳಂತ ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿ ಗುರುತಿಸಿ ಕೊಂಡಿತ್ತು. ತದ ನಂತರ ಈ ಪ್ರೌಢಶಾಲೆಯಲ್ಲೆ ಮುಂದಿನ ವಿದ್ಯಾಬ್ಯಾಸಕ್ಕೆ ನೆರವಾಗುವಂತೆ ಪಿಯು ಕಾಲೇಜನ್ನು ಸರ್ಕಾರ ಆರಂಬಿಸಿತು. ವಿದ್ಯಾರ್ಥಿಗಳ ಸಂಖ್ಯೆ ದಿನೆದಿನೇ ಹೆಚ್ಚಾದ ಕಾರಣ ಕೆಎಲ್ ಕೆ ಪ್ರೌಢಶಾಲೆ ಪಕ್ಕದಲ್ಲೇ ಮತ್ತೊಂದು ಹೊಸ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರವಾಯಿತು. ಇತ್ತ ಪಿಯು ಕಾಲೇಜು ಇಲ್ಲೇ ಉಳಿದು ಯಥಾಸ್ಥಿತಿಯಂತೆ ನಡೆದುಕೊಂಡು ಹೋಗುತ್ತಿರುವಾಗ ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಸರ್ಕಾರ ಈ ಮೈದಾನದ ಆವರಣದಲ್ಲಿ ಹೊಸ ಕಟ್ಟಡ ಕಟ್ಟಿ ಅವರು ಕೂಡ ಕಾಲೇಜು ಸ್ಥಳಾಂತರಿಸಿದರು.ಆದರೆ ಈಗ ಶಾಲೆ ದುಸ್ಥಿತಿಗೆ ತಲುಪಿರುವುದು ಶೋಚನೀಯ ಸಂಗತಿ. ಹಳೆ ಪ್ರೌಢ ಶಾಲೆ ಕೊಠಡಿಗಳ ಮೇಲ್ಛಾವಣಿ ಬೀಳುವ ಹಂತ ತಲುಪಿ, ಮೇಲ್ಭಾಗದಲ್ಲಿ ಗಿಡಗಂಟೆಗಳು ಬೆಳೆದು ಪಾಳು ಬಿದ್ದಿದ್ದರೆ ಉಳಿದ ಜಾಗ ಕುಡುಕರ ಆವಾಸ ಸ್ಥಾನವಾಗಿದೆ. ಇಲ್ಲಿ ಓದಿದ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ತಾವು ಓದಿದ ಶಾಲೆ ಯನ್ನೇನಾದರೂ ನೋಡ ಬೇಕೆಂದರೆ ಅದು ಗುರುತು ಸಿಗದಂತಾದ ಸ್ಥಿತಿ ತಲುಪಲಿದೆ.
ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಅಳಿವಿನಂಚಿನಲ್ಲಿರುವ ಈ ಶಾಲೆಯನ್ನು ಆದಷ್ಟು ಬೇಗಾ ದುರಸ್ಥಿಪಡಿಸಿ ಯಥಾಸ್ಥಿತಿ ಕಾಪಾಡುವಂತೆ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ.ಕೆ.ಎಲ್.ಕೆ ಪ್ರೌಢಶಾಲೆ ಹಳೆ ಕಟ್ಟಡ ನಮಗೆ ಸೇರಿದೆ. ಆದರೆ ಕಾಲೇಜಿನವರು ಸಮರ್ಪಕವಾಗಿ ಕಟ್ಟಡ ನೋಡಿ ಕೊಳ್ಳದ ಪರಿಣಾಮ ದುಸ್ಥಿತಿ ತಲುಪಿದೆ. ಸದ್ಯ ಮಕ್ಕಳ ಸಂಖ್ಯೆ ಕಡಿಮೆ ಇದ್ದು ನಮಗೆ ಹೊಸ ಕಟ್ಟಡವೇ ಸಾಕು. ಕಳೆದ ಬಾರಿ ಕೆಲವು ಕೊಠಡಿಗಳನ್ನು ದುರಸ್ತಿ ಮಾಡಿಸಿದ್ದೆವು, ಆದರೆ ಕಿಡಿಗೇಡಿಗಳು ಇಲ್ಲಿ ಅಳವಡಿಸಿದ್ದ ಸಿಸಿಟಿವಿ ಮತ್ತಿತರ ಪರಿಕರಗಳನ್ನು ಕದ್ದೊಯ್ದರು. ನಮಗೆ ಬರುವ ಅನುದಾನದಲ್ಲಿ ಇಷ್ಟು ದೊಡ್ಡ ಕಟ್ಟಡದ ದುರಸ್ಥಿ ಮಾಡಿಸಲು ಸಾಧ್ಯವಿಲ್ಲ.- ಪುಷ್ಪಾಂಜಲಿ ಉಪ ಪ್ರಾಚಾರ್ಯರು.ಕೆ.ಎಲ್.ಕೆ ಪ್ರೌಢಶಾಲೆ.
ಕೆ.ಎಲ್.ಕೆ. ಪ್ರೌಢ ಶಾಲೆ ದುರಸ್ಥಿಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೂ, ಆರ್ ಎಂಎಎಸ್ ಪತ್ರ ಬರೆದಿದ್ದು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 10ಲಕ್ಷ ರು. ಅನುದಾನ ನೀಡುವಂತೆ ಕೋರಲಾಗಿದೆ. ಆ ಹಣ ಬಿಡುಗಡೆಯಾದರೆ ದುರಸ್ಥಿ ಪಡಿಸಿ ಶಿಕ್ಷಣ ಇಲಾಖೆಗೆ ಬಳಸಿಕೊಳ್ಳಲಾಗುವುದು.- ಗಂಗಾಧರ್. ಕ್ಷೇತ್ರ ಶಿಕ್ಷಣಾಧಿಕಾರಿ ಬೀರೂರು ವಲಯ.
ಅಂದಿನ ಪರಿಸ್ಥಿಯಲ್ಲಿ ವಿದ್ಯಾಭ್ಯಾಸ ಬಹಳ ಕಷ್ಟವಾಗಿತ್ತು. ಹೇಗೋ ಮನೆಯವರು ಶಾಲೆಗೆ ಸೇರಿಸಿ ಇಲ್ಲಿನ ಗುರುಗಳು ಕಲಿಸಿದ ಪಾಠ ಕಲಿತು ನಾನಿಂದು ಈ ಮಟ್ಟಕ್ಕೆ ಬಂದಿದ್ದೇನೆ. ಈಗ ಈ ಕಟ್ಟಡದ ಸ್ಥಿತಿ ನೋಡಿದರೆ ದುಖಃವಾಗುತ್ತದೆ. ಎಷ್ಟೋ ಜನರಿಗೆ ಜ್ಞಾನದಾಸೋಹ ನೀಡಿದ ಈ ಶಾಲೆ ಕಟ್ಟಡ ಹೀಗಾಗಿರುವುದು ನೋವಿನ ಸಂಗತಿ. ಈ ಹಿಂದೆ ಇದ್ದ ರೀತಿಯಲ್ಲಿ ಕೊಠಡಿ ಮತ್ತಿತರ ಸ್ಥಳ ದುರಸ್ಥಿಗೊಳಿಸಿದರೆ, ಮುಂದಿನ ಪೀಳಿಗೆಗೆ ಮಕ್ಕಳಿಗೆ ತೋರಿಸುವ ಸ್ಮಾರಕವಾಗಲಿ ಎನ್ನುತ್ತಾರೆ.ಡಾ.ಚಂದ್ರಶೇಖರ್ ಮ್ಯಾಕ್ಸ್ ಆಸ್ಪತ್ರೆ , ಶಿವಮೊಗ್ಗ.6 ಬೀರೂರು 1
ಬೀರೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹಳೆಯ ಕೆ.ಎಲ್.ಕೆ.ಪ್ರೌಢಶಾಲಾ ಕಟ್ಟಡ ಬೀಳುವ ಹಂತದಲ್ಲಿರುವುದು.