ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ: ಆರು ವಿದ್ಯಾರ್ಥಿಗಳ ಆಯ್ಕೆ

KannadaprabhaNewsNetwork |  
Published : Oct 12, 2025, 01:02 AM IST
ವಿದ್ಯಾರ್ಥಿ | Kannada Prabha

ಸಾರಾಂಶ

ಈ ಸಾಲಿನ ಕೆಎಂಎ ವಿಶೇಷ ಪ್ರತಿಭಾ ಪುರಸ್ಕಾರ 2025ಕ್ಕೆ ಒಟ್ಟು ಆರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಪ್ರಾಯೋಜಕರ ನೆರವಿನಿಂದ ನೀಡಲಾಗುವ ಈ ಸಾಲಿನ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2025ಕ್ಕೆ ಜಿಲ್ಲೆಯ ಒಟ್ಟು ಆರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದು ಕೆ.ಎಂ.ಎ. ತಿಳಿಸಿದೆ.

ಕೆ.ಎಂ.ಎ. ಅಧ್ಯಕ್ಷರಾದ ಡಿ. ಹೆಚ್. ಸೂಫಿ ಹಾಜಿ ಯವರು ತಮ್ಮ ಪೋಷಕರಾದ ದಿವಂಗತ ಡಿ. ಪಿ. ಹುಸೈನಾರ್ ಹಾಜಿ ಮತ್ತು ಆಮೀನಾ ಅವರ ಸ್ಮರಣಾರ್ಥಕವಾಗಿ ಕಳೆದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ಓದಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿರುವ ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಇಬ್ಬರು ವಿದ್ಯಾರ್ಥಿನಿಯರನ್ನು ಆಯ್ಕೆಗೊಳಿಸಲಾಗಿದೆ. ಬಿಳುಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಕನ್ನಡ ವಿಷಯದಲ್ಲಿ 123 ಅಂಕ ಪಡೆದ ನಲ್ವತ್ತೋಕ್ಲಿನ ದುದ್ದಿಯಂಡ ಆರ್. ರೈಹಾನ ಮತ್ತು ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಕನ್ನಡ ವಿಷಯದಲ್ಲಿ 122 ಅಂಕ ಪಡೆದ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಎಸ್. ದೇವಿಪ್ರಿಯ ಈ ವಿಶೇಷ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಾರೆ.

ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಕೆ. ಎಂ. ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರು ತಮ್ಮ ಸಹೋದರ ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸುತ್ತಿರುವ ಕೆ. ಎಂ. ಎ. ವಿಶೇಷ ಪ್ರತಿಭಾ ಪುರಸ್ಕಾರಕ್ಕೆ 2024-25 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸುಂಟಿಕೊಪ್ಪದ ಸಂತ ಮೇರಿಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಸಿ.ಎನ್. ಡಿಂಪಲ್ ತಿಮ್ಮಯ್ಯ ಮತ್ತು ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿರಾಜಪೇಟೆಯ ಶ್ರೀ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ. ಎಂ. ಆಶ್ರಯಿ ಅಕ್ಕಮ್ಮ ಕ್ರಮವಾಗಿ ಆಯ್ಕೆಗೊಂಡಿದ್ದಾರೆ. ಈ ಪುರಸ್ಕಾರವು ತಲಾ ಹತ್ತು ಸಾವಿರ ರು. ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರವನ್ನು ಒಳಗೊಂಡಿರುತ್ತದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಎಂ.ಎ. ಮಹಮ್ಮದ್ ಅವರು ಪ್ರಾಯೋಜಿಸಿರುವ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರಕ್ಕೆ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಮೂರ್ನಾಡು ಜ್ಞಾನಜೋತಿ ಪ್ರೌಢಶಾಲೆಯ ವಿದ್ಯಾರ್ಥಿ ಸಿ.ಎಂ ಮೊಹಮ್ಮದ್ ಸಾಹಿಲ್ (620ಅಂಕ) ಮತ್ತು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಿ.ಎ. ಮೊಹಮ್ಮದ್ ಆಶಿಖ್ (599 ಅಂಕ) ಅವರನ್ನು ಆಯ್ಕೆಗೊಳಿಸಲಾಗಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಾತಿ-ಧರ್ಮ ಭೇದವಿಲ್ಲದೆ ಶೈಕ್ಷಣಿಕವಾಗಿ ಉತ್ತೇಜಿಸುವ ಉದ್ದೇಶದಿಂದ ಕೊಡವ ಮುಸ್ಲಿಂ ಅಸೋಸಿಯೇಷನ್ ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಿದೆ. ಸಂಸ್ಥೆಯ ವತಿಯಿಂದ 12ರಂದು ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಶ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ಸಮಾರಂಭಕ್ಕೆ ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕೆ.ಎಂ.ಎ. ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ