ಮಂಗಳೂರು: ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರಾಲಾಜಿ ವಿಭಾಗಕ್ಕೆ 25 ವರ್ಷ ಸಂದಿದೆ. 2000ರಲ್ಲಿ ಆರಂಭವಾದ ಈ ವಿಭಾಗವು ರೋಗ ನಿರ್ಣಯಕ್ಕೆ ಅಗತ್ಯವಾದ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಇಡೀ ಜಿಲ್ಲೆಯಲ್ಲೇ ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಗ್ಯಾಸ್ಟ್ರೊ ಎಂಟರಾಲಾಜಿ ವಿಭಾಗ ಮುಖ್ಯಸ್ಥ ಡಾ.ಬಿ.ವಿ. ತಂತ್ರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ವಿಭಾಗವು ಇಆರ್‌ಸಿಪಿ ಮತ್ತು ಇಯುಎಸ್‌ನಂತಹ ಸುಧಾರಿತ ಎಂಡೊಸ್ಕೋಪಿಕ್ ಕಾರ್ಯ ವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಕಾಂಪ್ಲೆಕ್ಸ್ ಬಿಲಿಯರಿ ಮತ್ತು ಪ್ಯಾನ್‌ಕ್ರಿಯಾಟಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಮಹತ್ವದ ಫಲಿತಾಂಶವನ್ನು ದಾಖಲಿಸಲು ನೆರವಾಗಿದೆ ಎಂದು ಹೇಳಿದರು.ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸಂದೀಪ್ ಗೋಪಾಲ್, ಮಕ್ಕಳು, ಯುವಜನತೆ ಹಾಗೂ ಮಹಿಳೆಯರಲ್ಲಿ ಐಬಿಡಿ ಎಂದು ಕರೆಯಲ್ಪಡುವ ಇನ್‌ಫ್ಲಮೆಟರಿ ಬೌವಲ್ ಡಿಸೀಸ್ (ಜೀರ್ಣಾಂಗದ ಕ್ಯಾನ್ಸರ್), ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (ಎನ್‌ಎಎಫ್‌ಎಲ್‌ಡಿ) ಮತ್ತು ಲಿವರ್ ಸಿರೊಸಿಸ್ ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಇವು ಸಾಮಾನ್ಯವಾಗಿ ಬೊಜ್ಜು ಮತ್ತು ಕಳಪೆ ಆಹಾರ ಪದ್ಧತಿಗೆ ಸಂಬಂಧಿಸಿದ ರೋಗಗಳಾಗಿದ್ದು, ಜೀವನಶೈಲಿ ಬದಲಾವಣೆ ಮಾಡುವುದರಿಂದ ಈ ಎಲ್ಲ ರೋಗಗಳನ್ನು ದೂರ ಮಾಡಲು ಸಾಧ್ಯ ಎಂದರು.
ಆಸ್ಪತ್ರೆಯ ಇನ್ನೋರ್ವ ಕನ್ಸಲ್ಟೆಂಟ್ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ಡಾ. ಅನುರಾಗ್ ಶೆಟ್ಟಿ ಮಾತನಾಡಿ, ಕೆಎಂಸಿಯು ಕರಾವಳಿ ಪ್ರದೇಶದಲ್ಲಿ ಸುಧಾರಿತ ಎಂಡೊಸ್ಕೊಪಿಕ್ ಚಿಕಿತ್ಸಾ ವಿಧಾನಗಳಾದ ಇಯುಎಸ್, ಇಆರ್‌ಸಿಪಿ, ಪಿಒಎಮ್, ಮ್ಯಾನೊಮೆಟ್ರಿ ಮತ್ತು ಫೈಬ್ರೊಸ್ಕ್ಯಾನ್ ಚಿಕಿತ್ಸೆಯನ್ನು ಪರಿಚಯಿಸಿದ ಮೊದಲ ಆಸ್ಪತ್ರೆಯಾಗಿದೆ ಎಂದು ಹೇಳಿದರು.ವರ್ಷಪೂರ್ತಿ ಜಾಗೃತಿ ಕಾರ್ಯಕ್ರಮ:
ಆಸ್ಪತ್ರೆಯ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸುರೇಶ್ ಶೆಣೈ ಮಾತನಾಡಿ, ಜೀರ್ಣಾಂಗ ವ್ಯವಸ್ಥೆಯ ಕುರಿತು ಈ ವರ್ಷದುದ್ದಕ್ಕೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಅಲ್ಲದೆ, ಜೀರ್ಣಾಂಗಕ್ಕೆ ಆರೋಗ್ಯಕರವಾದ ಆಹಾರಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ ಎಂದರು.ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಉನ್ನಿಕೃಷ್ಣನ್ ಮಾತನಾಡಿ, ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗವು ವರ್ಷಗಳ ಸಂಶೋಧನೆ, ಜೀರ್ಣಾಂಗ ಮತ್ತು ಲಿವರ್ ಆರೈಕೆಯಲ್ಲಿ ಹೊಸ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ವಿಭಾಗವು ಈವರೆಗೆ 27 ನುರಿತ ವೈದ್ಯರನ್ನು ತಯಾರು ಮಾಡಿದೆ. ಎನ್‌ಎಬಿಎಲ್ ಪ್ರಮಾಣಿತ- ಈ ಪ್ರದೇಶದ ಅತಿ ದೊಡ್ಡ ಲ್ಯಾಬ್ ಹಾಗೂ ಸುಧಾರಿತ ರೆಡಿಯೊಲಾಜಿ ಸೇವೆಯು 24 ಗಂಟೆಗಳ ನಿರಂತರ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಘೀರ್ ಸಿದ್ದಿಕಿ ಮಾತನಾಡಿ, ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸಕ ಸೇವೆ ಒದಗಿಸುವುದು ಸಂಸ್ಥೆಯ ಧ್ಯೇಯ ಎಂದರು.ಇದೇ ಸಂದರ್ಭದಲ್ಲಿ 25 ವರ್ಷಗಳ ಗ್ಯಾಸ್ಟ್ರೊ ಎಂಟರಾಲಾಜಿ ವಿಭಾಗದ ಸೇವೆಯನ್ನು ಸ್ಮರಿಸುವ ವಿಶೇಷ ಲೊಗೊ ಅನಾರಣಗೊಳಿಸಲಾಯಿತು.
ಕನ್ಸಲ್ಟೆಂಟ್ ಗ್ಯಾಸ್ಟ್ರೊ ಎಂಟರಾಲಾಜಿಸ್ಟ್ ಡಾ. ವಿದ್ಯಾ ಎಸ್. ಭಟ್, ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸತ್ಯನಾರಾಯಣ, ಇಂಟರ್‌ವೆನ್ಶನಲ್ ನ್ಯೂರೊ ರೆಡಿಯಾಲಾಜಿ ತಜ್ಞ ಡಾ. ಕೀರ್ತಿ ರಾಜ್ ಹಾಗೂ ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಾಜಿ ತಜ್ಞೆ ಡಾ. ಸ್ವಾತಿ ಇದ್ದರು.