ಬಸ್‌ನಲ್ಲಿ ಫಿಟ್ಸ್‌ಗೆ ಒಳಗಾದ ಪ್ರಯಾಣಿಕನ ಜೀವ ಉಳಿಸಿದ ಕೆಎಂಸಿ ತಂಡ!

KannadaprabhaNewsNetwork |  
Published : Aug 01, 2026, 04:00 AM IST
ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡ  | Kannada Prabha

ಸಾರಾಂಶ

ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕರೊಬ್ಬರಿಗೆ ಹಠಾತ್ ಫಿಟ್ಸ್ ಉಂಟಾದ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಹಾಗೂ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯಕೀಯ ಸಿಬ್ಬಂದಿಯ ಸಮಯೋಚಿತ ನೆರವಿನಿಂದ ಜೀವ ರಕ್ಷಿಸಲಾದ ಘಟನೆ ನಡೆದಿದೆ.

ಮಂಗಳೂರು: ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕರೊಬ್ಬರಿಗೆ ಹಠಾತ್ ಫಿಟ್ಸ್ ಉಂಟಾದ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಹಾಗೂ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯಕೀಯ ಸಿಬ್ಬಂದಿಯ ಸಮಯೋಚಿತ ನೆರವಿನಿಂದ ಜೀವ ರಕ್ಷಿಸಲಾದ ಘಟನೆ ನಡೆದಿದೆ.

ಖಾಸಗಿ ಬಸ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಕಿಶನ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಪ್ರಯಾಣದ ವೇಳೆ ಇದ್ದಕ್ಕಿದ್ದಂತೆ ಫಿಟ್ಸ್ ಉಂಟಾಗಿ ಪ್ರಜ್ಞೆ ತಪ್ಪಿ ಬಸ್‌ನಲ್ಲೇ ಬಿದ್ದಿದ್ದು, ಅವರ ಬಲ ಭುಜದ ಮೂಳೆ ಸ್ಥಳಾಂತರಗೊಂಡು (ಶೋಲ್ಡರ್ ಡಿಸ್ಲೊಕೇಶನ್) ತೀವ್ರ ಗಾಯವಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಬಸ್ ಚಾಲಕ, ನಿರ್ವಾಹಕ ಹಾಗೂ ಸಹಪ್ರಯಾಣಿಕರು ಯಾವುದೇ ಸಮಯ ವ್ಯರ್ಥ ಮಾಡದೆ ಬಸ್ ಅನ್ನು ನೇರವಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದರು.

ತೀವ್ರ ಅಸ್ವಸ್ಥರಾಗಿದ್ದ ಕಿಶನ್ ಅವರನ್ನು ವೈದ್ಯಕೀಯ ತಂಡ ತಕ್ಷಣ ಪರೀಕ್ಷಿಸಿ ಫಿಟ್ಸ್ ನಿಯಂತ್ರಣಕ್ಕೆ ಅಗತ್ಯ ಔಷಧಿ ನೀಡಿದರು. ಬಳಿಕ ತುರ್ತು ಚಿಕಿತ್ಸಾ ತಂಡ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಕ್ಲೋಸ್ಡ್ ರಿಡಕ್ಷನ್ ವಿಧಾನದ ಮೂಲಕ ಸ್ಥಳಾಂತರಗೊಂಡಿದ್ದ ಭುಜವನ್ನು ಯಶಸ್ವಿಯಾಗಿ ಯಥಾಸ್ಥಿತಿಗೆ ತಂದಿದ್ದಾರೆ.

ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಜೀದು ರಾಧಾಕೃಷ್ಣನ್ ಮಾತನಾಡಿ, ರೋಗಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆತಂದಿದ್ದರಿಂದ ನಾವು ತಕ್ಷಣವೇ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿ, ಅಗತ್ಯ ಚಿಕಿತ್ಸೆ ಆರಂಭಿಸಲು ಸಾಧ್ಯವಾಯಿತು. ಬಸ್ ಚಾಲಕ, ನಿರ್ವಾಹಕ ಹಾಗೂ ಸಹಪ್ರಯಾಣಿಕರು ತೋರಿದ ಸಮಯಪ್ರಜ್ಞೆ ಮತ್ತು ತ್ವರಿತ ಪ್ರತಿಕ್ರಿಯೆ ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಯಾವುದೇ ವಿಳಂಬವಿಲ್ಲದೆ ಅವರನ್ನು ಆಸ್ಪತ್ರೆಗೆ ಕರೆತಂದ ಅವರ ನಿರ್ಧಾರ ರೋಗಿಯ ಸುರಕ್ಷಿತ ಚೇತರಿಕೆಗೆ ಮಹತ್ತರ ನೆರವಾಯಿತು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಷ್ಠಾನವಾಗದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ: ಉದಯಸಿಂಗ್ ರಾಯಚೂರ
ವೈಜ್ಞಾನಿಕ ಬೇಸಾಯದಿಂದ 100 ಟನ್‌ ಕಬ್ಬಿನ ಇಳುವರಿ