ಹುಬ್ಬಳ್ಳಿ: ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತದಿಂದ ಕೆಎಂಸಿಆರ್‌ಐನಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದು, ಯಾವುದೇ ಸ್ಥಿತಿ ಎದುರಾದರೂ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಈವರೆಗೂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಕೋವಿಡ್ ಹಾವಳಿ ವೇಳೆ ಕೆಎಂಸಿಆರ್‌ಐನಲ್ಲಿ ಕಲ್ಪಿಸಿರುವ ಎಲ್ಲ ಸೌಲಭ್ಯಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಜ್ಜುಗೊಳಿಸಲಾಗಿದೆ. ಔಷಧಿ, ಆಕ್ಸಿಜನ್, ವೆಂಟಿಲೇಟರ್‌ಗಳ ಸಂಗ್ರಹವಿದ್ದು, ಸಮಸ್ಯೆ ಏನಿಲ್ಲ ಎಂದರು.
ಈವರೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ದಾಖಲಾಗಿರುವವರ ಮೇಲೆ ನಿಗಾ ವಹಿಸಲಾಗಿದೆ. ಕೋವಿಡ್ ಟೆಸ್ಟಿಂಗ್ ಪರಿಕರಗಳು ಇನ್ನೂ ಬರಬೇಕಿದ್ದು, ವಾರಾಂತ್ಯದಲ್ಲಿ ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ. ಟೆಸ್ಟಿಂಗ್ ಕಿಟ್‌ಗಳು ಬಂದ ನಂತರ ರ್‍ಯಾಂಡಮ್ ಟೆಸ್ಟ್ ಮಾಡಲಾಗುವುದು ಎಂದು ತಿಳಿಸಿದರು.ಇದೇ ವೇಳೆ ವೈದ್ಯರಿಂದ ಔಷಧಿ ಸಂಗ್ರಹಣೆ ಕುರಿತ ಮಾಹಿತಿ ಪಡೆದ ಸಚಿವರು, ಅವಧಿ ಮೀರಿದ ಮತ್ತು ಮುಗಿಯುವ ಹಂತದಲ್ಲಿರುವುದನ್ನು ಪರಿಶೀಲಿಸುವಂತೆ ಸೂಚಿಸಿದರು.
ಈ ವೇಳೆ ಕೋವಿಡ್ ಕುರಿತಂತೆ ಆಸ್ಪತ್ರೆ ಕೈಗೊಂಡ ಸಿದ್ಧತೆ ಕುರಿತಂತೆ ಡಾ. ರಾಜಶೇಖರ್ ದ್ಯಾಬೇರಿ ಮಾಹಿತಿ ನೀಡಿ, ಕೋವಿಡ್ ರೋಗಿಗಳಿಗೆಂದೇ 40 ಬೆಡ್ ವ್ಯವಸ್ಥೆ ಮಾಡಲಾಗಿದೆ. 25 ವೆಂಟಿಲೇಟರ್ ಬೆಡ್ ಸಿದ್ಧವಾಗಿವೆ. ಆಕ್ಸಿಜನ್ ಮತ್ತು ಆರ್‌ಟಿಪಿಸಿಆರ್ ಟೆಸ್ಟಿಂಗ್‌ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಸ್ಟಿಂಗ್ ಕಿಟ್ ಬರಬೇಕಿದ್ದು, ಬಂದ ತಕ್ಷಣವೇ ಟೆಸ್ಟಿಂಗ್ ಆರಂಭಿಸಲಾಗುವುದು. ಚಿಕಿತ್ಸೆ ಕುರಿತಂತೆ ಸರ್ಕಾರದ ಮಾರ್ಗಸೂಚಿ ದೊರೆತಿದ್ದು, ಆರಂಭಿಕ ಲಕ್ಷಣಗಳು ಕಂಡು ಬಂದರೆ ಮನೆಯಲ್ಲೇ ಚಿಕಿತ್ಸೆ ಮತ್ತು ತೀವ್ರವಾದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅದರಂತೆ ವಿವಿಧ ವೈದ್ಯರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಸಿಜಿರಿನ್ ಹೆರಿಗೆ ಕಡಿಮೆ ಮಾಡಲು ವೈದ್ಯರು ಶ್ರಮಿಸಬೇಕು ಎಂದು ಸಲಹೆ ನೀಡಿದ ಅವರು, ಈ ಸಂಬಂಧ ಜಾಗೃತಿ ಕೈಗೊಳ್ಳುವಂತೆ ಸೂಚಿಸಿದರು.
ಮನವಿ ಸಲ್ಲಿಕೆ: ಕೆಎಂಸಿಆರ್‌ಐಗೆ ಭೇಟಿ ನೀಡಿದ್ದ ಸಚಿವರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆವರಣದ ಮಳಿಗೆ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಸಚಿವರ ಎದುರು ದೂರಿದರು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಡಿ ಗ್ರುಪ್ ನೌಕರರು ತಮ್ಮ ವೇತನ ಸಮಸ್ಯೆ ಬಗೆಹರಿಸುವಂತೆಯೂ ಸಚಿವರಿಗೆ ಮನವಿ ಮಾಡಿದರು.