ಕೆಎಂಸಿಆರ್‌ಐಗೆ ಬರಲಿ 100 ಕೋಟಿ ವಿಶೇಷ ಅನುದಾನ

KannadaprabhaNewsNetwork |  
Published : Mar 02, 2026, 02:30 AM IST
ಕೆಎಂಸಿಆರ್‌ಐ ಒಂದು ನೋಟ. | Kannada Prabha

ಸಾರಾಂಶ

₹25 ಕೋಟಿ ವೆಚ್ಚದ ಪೆಟ್‌ ಸ್ಕ್ಯಾನ್‌ ಬೇಕೆಂಬ ಬೇಡಿಕೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಂಜೀವಿನಿ ಹುಬ್ಬಳ್ಳಿಯ ಕೆಎಂಸಿಆರ್‌ಐನ ಬಹುದಿನದ ಬೇಡಿಕೆಯಾದ ಪೆಟ್‌ ಸ್ಕ್ಯಾನ್‌, ಲಿನಾಕ್‌ ಯಂತ್ರ, ಚಿಕ್ಕಮಕ್ಕಳ ವಿಭಾಗದ ಮೇಲ್ದರ್ಜೆಗೆ ವಿಶೇಷ ಅನುದಾನ ಸಿಗುವುದೇ?

ಇದು ರಾಜ್ಯ ಸರ್ಕಾರ ಮಾ. 6ರಂದು ಮಂಡಿಸಲಿರುವ ಬಜೆಟ್‌ ಮೇಲೆ ಹುಬ್ಬಳ್ಳಿ ಕೆಎಂಸಿಆರ್‌ಐನ ನಿರೀಕ್ಷೆಯಾಗಿದೆ. ಕೆಎಂಸಿಆರ್‌ಐ ಉತ್ತರ ಕರ್ನಾಟಕದ ಪಾಲಿನ ಕಾಮಧೇನು. ಬರೋಬ್ಬರಿ 12-15 ಜಿಲ್ಲೆಗಳ ಬಡ ಮತ್ತು ಮಧ್ಯಮ ರೋಗಿಗಳು ಹೆಚ್ಚಾಗಿ ಅವಲಂಬಿಸಿರುವುದು ಹುಬ್ಬಳ್ಳಿ ಕೆಎಂಸಿಆರ್‌ಐ ಅನ್ನೇ. ಅಪಘಾತ ಆಗಲಿ, ತುರ್ತು ಸಂದರ್ಭಗಳಾಗಲಿ ಎಲ್ಲರೂ ನೇರವಾಗಿ ಕೆಎಂಸಿಆರ್‌ಐಗೆ ಬರುತ್ತಾರೆ. ಅದರಲ್ಲೂ ಕೊರೋನಾ ಬಳಿಕ ಕೆಎಂಸಿಆರ್‌ಐ ಇಮೇಜ್‌ ಬದಲಾಗಿದೆ. ಮೊದಲೆಲ್ಲ ಬರೀ ಬಡವರ ಆಸ್ಪತ್ರೆ ಅಷ್ಟೇ ಆಗಿತ್ತು. ಆದರೆ, ಶ್ರೀಮಂತರು, ಶಾಸಕರು, ಕೂಡ ಇಲ್ಲಿನ ಸೇವೆಗೆ ಫಿದಾ ಆಗಿ ದಾಖಲಾಗುತ್ತಿರುವುದು ವಿಶೇಷ.

ಕೆಎಂಸಿಆರ್‌ಐನ ಇಮೇಜ್‌ ಏನೋ ಬದಲಾಗಿರುವುದುಂಟು. ಆದರೆ, ಇಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಅನುಕೂಲವಾಗುವ ಪೆಟ್‌ ಸ್ಕ್ಯಾನರ್‌ ಇಲ್ಲ. ಹೀಗಾಗಿ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಬರುವ ಕ್ಯಾನ್ಸರ್‌ ರೋಗಿಗಳಿಗೆ ಪೆಟ್‌ ಸ್ಕ್ಯಾನ್‌ ಮಾಡಿಸಬೇಕೆಂದರೆ ಹುಬ್ಬಳ್ಳಿ ಸ್ಕ್ಯಾನ್‌ ಸೆಂಟರ್‌ ಅಥವಾ ಎನ್‌ಆರ್‌ಎಂ ಸೆಂಟರ್‌ಗೆ ಕಳುಹಿಸಬೇಕು. ಇಲ್ಲಿ ಸ್ಕ್ಯಾನ್‌ ಮಾಡಿಕೊಂಡಿಸಿಕೊಂಡು ಬರಬೇಕೆಂದರೆ ಕನಿಷ್ಠವೆಂದರೂ ₹25 ಸಾವಿರ ಖರ್ಚಾಗುತ್ತದೆ. ಅದೇ ಕೆಎಂಸಿಯಲ್ಲೇ ಇದ್ದರೆ ಬಿಪಿಎಲ್‌ ಕಾರ್ಡ್‌ದಾರರಿಗೆ, ಎಸ್ಸಿ-ಎಸ್ಟಿ ಇದ್ದರೆ ಉಚಿತವಾಗುತ್ತದೆ. ಉಳಿದ ರೋಗಿಗಳಿಗೆ ಶೇ. 40ರಷ್ಟೇ ಶುಲ್ಕವಾಗುತ್ತದೆ. ಹೀಗಾಗಿ, ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ₹25 ಕೋಟಿ ವೆಚ್ಚದ ಪೆಟ್‌ ಸ್ಕ್ಯಾನ್‌ ಬೇಕೆಂಬ ಬೇಡಿಕೆಯ ಪ್ರಸ್ತಾವನೆ ಕಳುಹಿಸಿದೆ. ಸರ್ಕಾರ ಈ ಬಜೆಟ್‌ನಲ್ಲಿ ಇದಕ್ಕೆ ಅಸ್ತು ಎಂದರೆ ಅನುಕೂಲವಾಗುತ್ತದೆ ಎಂಬುದು ಅಧಿಕಾರಿ ವರ್ಗದ ಅಂಬೋಣ.

ಇನ್ನು ರೆಡಿಯೋ ಥೆರಪಿಗೆ ಬಳಸುವ ಲಿನಾಕ್‌ ಯಂತ್ರವನ್ನೂ ಮಂಜೂರು ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಹಾಗಂತ ಲಿನಾಕ್‌ ಯಂತ್ರ ಇಲ್ಲ ಅಂತೇನೂ ಅಲ್ಲ. ಆದರೆ, ಅದು ಹಳೆಯದಾಗಿದೆ. ಹೀಗಾಗಿ ಹೆಚ್ಚಿನ ಉಪಯೋಗ ಸಾಧ್ಯವಾಗುತ್ತಿಲ್ಲ. ₹25 ಕೋಟಿ ವೆಚ್ಚದ ಹೊಸ ಲಿನಾಕ್‌ ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ.

ಇನ್ನು ಚಿಕ್ಕಮಕ್ಕಳ ವಿಭಾಗವನ್ನು ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೇರಿಸಬೇಕಿದೆ. ಸದ್ಯ 240 ಮಕ್ಕಳನ್ನು ಅಲ್ಲಿ ದಾಖಲು ಮಾಡಬಹುದಾಗಿದೆ. ಆದರೆ, ದಿನೇ ದಿನೇ ಅಲ್ಲಿ ಚಿಕಿತ್ಸೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಆಗದೇ ಇತ್ತ ಬಿಡಲು ಆಗದೇ ವೈದ್ಯರು ಗೊಂದಲಕ್ಕೊಳಗಾಗುವ ಪರಿಸ್ಥಿತಿ ಇದೆ. ಈ ಕಾರಣದಿಂದ ಚಿಕ್ಕಮಕ್ಕಳ ವಿಭಾಗವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಎಂಬ ಪ್ರಸ್ತಾವನೆ ಇದೆ. ಇದಕ್ಕೆ ₹25 ಕೋಟಿಗೂ ಅಧಿಕ ಅನುದಾನ ಬೇಕು. ಇದು ಕೂಡ ಸರ್ಕಾರದ ಮಟ್ಟದಲ್ಲೇ ಇದೆ. ಈ ಬಜೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ಸಿಗುತ್ತದೆಯೇ ಎಂಬ ನಿರೀಕ್ಷೆಯೂ ಮನೆ ಮಾಡಿದೆ.

ಜತೆಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜ್‌ಗಳಿದ್ದರೂ ಅಲ್ಲಿನ ಕಾಲೇಜ್‌ಗಳು ರೋಗಿಗಳು ಬಂದರೆ ಯಾಕಪ್ಪ ಸುಮ್ಮನೆ ಇಲ್ಲಿ ಹುಬ್ಬಳ್ಳಿ ಕೆಎಂಸಿಗೆ ಸಾಗಹಾಕಿದರೆ ಮುಗಿತು ಎಂಬ ಮನೋಭಾವದಲ್ಲಿದ್ದಾರೆ. ಹೀಗಾಗಿ ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಆಸ್ಪತ್ರೆ, ವೈದ್ಯಕೀಯ ಕಾಲೇಜ್‌ಗಳಿದ್ದರೂ ಕೆಎಂಸಿಗೆ ಬರುವವರ ಸಂಖ್ಯೆಯೇ ಹೆಚ್ಚು. ಅದಕ್ಕಾಗಿ ಕೆಎಂಸಿಆರ್‌ಐಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ವಿಶೇಷ ಅನುದಾನ ನೀಡಬೇಕೆಂಬ ಕೂಗು ಇದೆ.

ಒಟ್ಟಿನಲ್ಲಿ ಕೆಎಂಸಿಆರ್‌ಐ ಅಭಿವೃದ್ಧಿ, ಪೆಟ್‌ ಸ್ಕ್ಯಾನ್‌ ಸೇರಿದಂತೆ ವಿವಿಧ ಯಂತ್ರಗಳ ಖರೀದಿಗೆ ಕನಿಷ್ಠವೆಂದರೂ ₹100 ಕೋಟಿ ವಿಶೇಷ ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

ಪೆಟ್‌ ಸ್ಕ್ಯಾನ್‌, ಲಿನಾಕ್‌ ಯಂತ್ರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಸದ್ಯ 240 ಮಕ್ಕಳ ದಾಖಲಾತಿಯ ಸಾಮರ್ಥ್ಯ ಹೊಂದಿರುವ ಚಿಕ್ಕಮಕ್ಕಳ ವಿಭಾಗವನ್ನು 400 ಹಾಸಿಗೆಗೆ ಏರಿಸಬೇಕಿದೆ. ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆಎಂಸಿಆರ್‌ಐ ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಡೋಟ ಬೇಡವೆಂದು ಸಿಎಂ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕೊಟ್ಟೂರು ಕೆರೆ ತುಂಬಿಸುವ ಯೋಜನೆಗೆ ಸಿಗುತ್ತಾ ಹಸಿರು ನಿಶಾನೆ?