ಕೊಪ್ಪಳ: ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿಯಬೇಕು. ಕಾರ್ಖಾನೆಗಳ ತ್ಯಾಜ್ಯದಿಂದ ಸಂಕಷ್ಟದಲ್ಲಿ ಇರುವ ಜನರ ಭಾವನೆಗೆ ಸ್ಪಂದಿಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ಹೇಳಿದ್ದಾರೆ. ಆದರೂ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ ಅವರು, ಶಾಸಕ, ಸಂಸದರ ಹೆಸರು ಹೇಳದೆಯೇ ತೀವ್ರ ತರಾಟೆಗೆ ತೆಗೆದುಕೊಂಡರು.
ತುಂಗಭದ್ರಾ ಕ್ರಸ್ಟ್ ಅಳವಡಿಸುವ ಕಾರ್ಯಕ್ಕೂ ರಾಜ್ಯ ಸರ್ಕಾರ ಹಣ ಕೊಟ್ಟು, ವಾಪಸ್ ಪಡೆಯುವುದು ಎಂದರೆ ಏನರ್ಥ? ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಅದನ್ನು ತುರ್ತಾಗಿ ಮಾಡಬೇಕಾಗಿದ್ದರೂ ಅದಕ್ಕೂ ಹಣ ಕೊಡುವಲ್ಲಿ ಮೀನಮೇಷ ಮಾಡಿದ್ದು ಯಾವ ನ್ಯಾಯ ಎಂದು ಕಿಡಿಕಾರಿದರು.ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದ್ದು, ಅದನ್ನು ಬಿಜೆಪಿಯೊಂದಿಗೆ ಕೈಜೋಡಿ ಕಿತ್ತೊಗೆಯಬೇಕಾಗಿದೆ. ಜನರ ಹಿತಕ್ಕಾಗಿ ಈ ಕಾರ್ಯ ತುರ್ತಾಗಿ ಆಗಬೇಕಾಗಿದ್ದು, ಜನರು ಸಹ ಸಿದ್ಧವಾಗಿದ್ದಾರೆ ಎಂದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಕಾರ್ಖಾನೆ ಧೂಳಿನಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಜನರ ಆರೋಗ್ಯ ಹಾಳಾಗಿ ಹೋಗಿದೆ. ಅಷ್ಟಾದರೂ ಸ್ಥಳೀಯ ಶಾಸಕರು, ಸಂಸದರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಜೆಡಿಎಸ್‌ಗೆ ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಪಡೆ ಇದೆ. ಅವರೆಲ್ಲರನ್ನು ಒಗ್ಗೂಡಿ, ಪಕ್ಷ ಸಂಘಟಿಸಬೇಕಾಗಿದೆ. ಪಕ್ಷ ಬಲಪಡಿಸಲು ಸ್ವಯಂ ಪ್ರೇರಿತವಾಗಿ ಶ್ರಮಿಸುತ್ತಿದ್ದಾರೆ ಎಂದರು.