ಖಾಸಗಿ ಶಾಲಾ ಮಾನ್ಯತೆ ಮಾನದಂಡ ಇನ್ನಷ್ಟು ಸರಳ!

KannadaprabhaNewsNetwork |  
Published : Mar 02, 2026, 02:15 AM IST
ಶಾಲೆ | Kannada Prabha

ಸಾರಾಂಶ

‘ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ’, ಎಲ್ಲ ದಿಕ್ಕಿನಲ್ಲೂ ರಸ್ತೆ ಇರಬೇಕು ಎಂಬುದು ಸೇರಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಹೊಸ ಮಾನ್ಯತೆ ಹಾಗೂ ಹಾಲಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಇರುವ ಹಲವು ಕಠಿಣ ಹಾಗೂ ಅವೈಜ್ಞಾನಿಕ ಮಾದದಂಡಗಳನ್ನು ಸರಳೀಕರಿಸಲು ಸರ್ಕಾರ ಮುಂದಾಗಿದೆ.

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ’, ಎಲ್ಲ ದಿಕ್ಕಿನಲ್ಲೂ ರಸ್ತೆ ಇರಬೇಕು ಎಂಬುದು ಸೇರಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಹೊಸ ಮಾನ್ಯತೆ ಹಾಗೂ ಹಾಲಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಇರುವ ಹಲವು ಕಠಿಣ ಹಾಗೂ ಅವೈಜ್ಞಾನಿಕ ಮಾದದಂಡಗಳನ್ನು ಸರಳೀಕರಿಸಲು ಸರ್ಕಾರ ಮುಂದಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಮಾನದಂಡಗಳನ್ನು ಸರಳೀಕರಿಸಲಾಗುತ್ತಿದೆ. ಅಲ್ಲದೆ, ಅಧಿಕಾರಿಗಳಿಂದ ಭ್ರಷ್ಟಾಚಾರ, ಲಂಚತನಕ್ಕೆ ಅವಕಾಶವಾಗದಂತೆ ಆನ್‌ಲೈನ್‌ ಮೂಲಕ ಎಲ್ಲವನ್ನೂ ಆಟೋಮೇಟೆಡ್‌ ಮಾದರಿಯಲ್ಲಿ ಪ್ರಕ್ರಿಯೆ ನಡೆಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲಾ ಮಾನ್ಯತೆ/ನವೀಕರಣ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ. ಶಾಲೆ ಆರಂಭಿಸಬೇಕಾದರೆ ಅಗತ್ಯ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕೆಂದು ಕಂದಾಯ ಇಲಾಖೆಯಿಂದ ಪರಿವರ್ತನೆ ಮಾಡಿಸಿಕೊಳ್ಳಬೇಕು. ಎಲ್ಲ ದಿಕ್ಕಿನಲ್ಲೂ ಆ ಜಾಗಕ್ಕೆ ರಸ್ತೆ ಇರಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಶಾಲೆ ಆರಂಭಕ್ಕೆ ಅಥವಾ ಶಾಲೆ ನಡೆಸಲು ನಿರ್ದಿಷ್ಟ ಪ್ರಮಾಣದ ಭೂಮಿ ಇರಬೇಕೆಂಬ ನಿಯಮಗಳು ಅವೈಜ್ಞಾನಿಕ ಎನ್ನುವುದು ಆಡಳಿತ ಮಂಡಳಿಗಳ ವಾದವಾಗಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ ಆದೇಶದ ನಂತರ ಜಾರಿಗೆ ತಂದ ಶಾಲಾ ಕಟ್ಟಡದ ಸುರಕ್ಷತೆ ಮತ್ತು ಅಗ್ನಿಸುರಕ್ಷತೆ ಪ್ರಮಾಣ ಪತ್ರವನ್ನು ಆಯಾ ಇಲಾಖೆಗಳಿಂದ ಪಡೆದು ಸಲ್ಲಿಸಬೇಕೆಂಬ ನಿಯಮದ ಬಗ್ಗೆ ತೀವ್ರ ಆಕ್ಷೇಪ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮಾನ್ಯತೆ/ನವೀಕರಣ ವಿಚಾದ ಸಮಸ್ಯೆಗಳ ಬಗೆಹರಿಸಿ ಮಾನದಂಡಗಳನ್ನು ಸರಳೀಕರಿಸಲು ಸದನ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ಕೂಡ ಹಲವು ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದೆ. ಇದರ ನಡುವೆ ಮಾನದಂಡಗಳ ಸರಳೀಕರಣಕ್ಕೆ ಕರಡು ನಿಯಮಾವಳಿಗಳನ್ನು ಶಾಲಾ ಶಿಕ್ಷಣ ಇಲಾಖೆ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲೇ ಸಾರ್ವಜನಿಕ ಆಕ್ಷೇಪಕ್ಕಾಗಿ ಪ್ರಕಟಿಸಲಿದೆ.

ಭೂ ಪರಿವರ್ತನೆಗೆ ವಿನಾಯಿತಿ:

ಹೊಸ ನಿಯಮದಲ್ಲಿ ಶಾಲೆ ಆರಂಭಿಸಲು ಅಗತ್ಯ ಭೂಮಿಗೆ ಇ-ಖಾತಾ ಅಥವಾ ಖಾತೆ ಪಹಣಿ(ಆರ್‌ಟಿಸಿ) ಇದ್ದರೆ ಸಾಕು ಎಂಬ ನಿಯಮ ತರಲಾಗುತ್ತಿದ್ದು, ಆ ಭೂಮಿ ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿರಬೇಕೆಂಬ ನಿಯಮ ಕೈಬಿಡಲಾಗುತ್ತಿದೆ.

ಅಗ್ನಿ-ಕಟ್ಟಡ ಸುರಕ್ಷತಾ ಪತ್ರ ಆನ್‌ಲೈನ್‌:

ಶಾಲಾ ಕಟ್ಟಡ ಸುರಕ್ಷತೆ ಮತ್ತು ಅಗ್ನಿಸುರಕ್ಷತಾ ಪತ್ರಗಳನ್ನು ಖಾಸಗಿ ಶಾಲೆಗಳು ಸಲ್ಲಿಸಬೇಕಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗಳಿಂದಲೇ ಆನ್‌ಲೈನ್‌ ಮೂಲಕ ಶಿಕ್ಷಣ ಇಲಾಖೆ ಪಡೆದುಕೊಳ್ಳಲಿದೆ. ಏಕೆಂದರೆ ಶಾಲೆಯವರು ಪ್ರಮಾಣ ಪತ್ರ ತರಲು ಇಲಾಖೆಗಳಿಗೆ ಹೋದಾಗ ಭಾರೀ ಭಷ್ಟಾಚಾರದ ಆರೋಪ ಕೇಳಿಬಂದಿತ್ತು. ಹಾಗಾಗಿ ಸುಪ್ರೀಂ ಕೋರ್ಟ್‌ ಆದೇಶದಂತೆ ಮಕ್ಕಳ ಸುರಕ್ಷತೆಗಾಗಿ ಈ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆದರೆ, ಸಂಪೂರ್ಣ ಆನ್‌ಲೈನ್‌ಗೊಳಿಸಿ ಸಂಬಂಧಿಸಿದ ಇಲಾಖೆಗಳಿಂದಲೇ ಪ್ರಮಾಣ ಪತ್ರ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-ಬಾಕ್ಸ್‌-

ಈವರೆಗೆ ಶೇ.25 ಶಾಲೆಮಾನ್ಯತೆ ಆಗುತ್ತಿದ್ದವು

ಕಳೆದ ಕೆಲ ವರ್ಷಗಳಿಂದ ಇಡೀ ವರ್ಷದಲ್ಲಿ ಶೇ.25ರಷ್ಟು ಶಾಲೆಗಳ ಮಾನ್ಯತೆ ನವೀಕರಣವೂ ಪೂರ್ಣವಾಗುತ್ತಿರಲಿಲ್ಲ. ಉಳಿದ ಶೇ.75ರಷ್ಟು ಶಾಲೆಗಳ ಮಾನ್ಯತೆ ನವೀಕರಣವೇ ಆಗುತ್ತಿರಲಿಲ್ಲ. ಇದರಿಂದ ಒಂದು ರೀತಿಯಲ್ಲಿ ಅವುಗಳು ಅನಧಿಕೃತ ಶಾಲೆಗಳ ಹೆಸರಿಗೆ ಸೇರುತ್ತಿದ್ದವು. ಆದರೆ, ಅನಧಿಕೃತ ಶಾಲೆ ಎಂಬ ಹಣೆಪಟ್ಟಿಯಿಂದ ಬಚಾವ್‌ ಮಾಡಲು ವಿವಿಧ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಚಿವರ ಮೂಲಕ ಆಡಳಿತ ಮಂಡಳಿಗಳು ಒತ್ತಡ ತಂದು ಕೆಲ ಷರತ್ತು ವಿಧಿಸಿ ಛಾಪಾಕಾಗದದಲ್ಲಿ ಮುಚ್ಚಳಿಕೆ ಬರೆಸಿಕೊಂಡು ಮಾನ್ಯತೆ ನವೀಕರಣ ಮಾಡಿಕೊಡಲಾಗುತ್ತಿತ್ತು. ಆದರೆ, ಅಂಥ ಸಂಪ್ರದಾಯಕ್ಕೆ ಹೈಕೋರ್ಟ್‌ ಚಾಟಿ ಬೀಸಿ ಮುಚ್ಚಳಿಕೆ ಮೂಲಕ ಯಾವುದೇ ಕಾರಣಕ್ಕೂ ಮಾನ್ಯತೆ ನವೀಕರಣ ಮಾಡದಂತೆ ಆದೇಶ ಮಾಡಿದೆ. ಆದರೂ ಈ ವರ್ಷವೂ ಸಾಕಷ್ಟು ಶಾಲೆಗಳ ಮಾನ್ಯತೆ ನವೀಕರಣ ಆಗಿಲ್ಲ. ಮುಚ್ಚಳಿಕೆ ಬದಲು ಪರೀಕ್ಷಾ ದಿನವನ್ನೂ ಮೀರಿ ಮಾನ್ಯತೆಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ಯೋಜನೆ: ನಾಗೇಶ
ದತ್ತು ನೀಡಿದ ತಾಯಿಗೂ ಜೀವನಾಂಶ ಕಡ್ಡಾಯ