ಅಕ್ಷರಕ್ಕೆ ಜಾತಿಯಿಲ್ಲ; ಮಕ್ಕಳಲ್ಲಿ ಜಾತಿಭಾವನೆ ಬಿತ್ತಬೇಡಿ

KannadaprabhaNewsNetwork |  
Published : Nov 26, 2026, 01:15 AM IST
25ಕೆಆರ್ ಎಂಎನ್ 1.ಜೆಪಿಜಿರಾಮನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ -2026 ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಅಕ್ಷರಕ್ಕೆ ಜಾತಿಯಿಲ್ಲ, ವಿದ್ಯೆಗೆ ಧರ್ಮವಿಲ್ಲ, ಜ್ಞಾನಕ್ಕೆ ಗಡಿಯಿಲ್ಲ. ಶಾಲೆಯೆಂಬ ಜ್ಞಾನದ ದೇಗುಲದಲ್ಲಿ ಮಕ್ಕಳು ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವಗಳಿಂದ ದೂರವಿದ್ದು, ಮಾನವೀಯ ಮೌಲ್ಯಗಳೊಂದಿಗೆ ಬೆಳೆಯಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಅಕ್ಷರಕ್ಕೆ ಜಾತಿಯಿಲ್ಲ, ವಿದ್ಯೆಗೆ ಧರ್ಮವಿಲ್ಲ, ಜ್ಞಾನಕ್ಕೆ ಗಡಿಯಿಲ್ಲ. ಶಾಲೆಯೆಂಬ ಜ್ಞಾನದ ದೇಗುಲದಲ್ಲಿ ಮಕ್ಕಳು ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವಗಳಿಂದ ದೂರವಿದ್ದು, ಮಾನವೀಯ ಮೌಲ್ಯಗಳೊಂದಿಗೆ ಬೆಳೆಯಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ -2026 ಸಮಾರಂಭ ಉದ್ಘಾಟಿಸಿದ ಅವರು, ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವದ ವಿಷವನ್ನು ಬಿತ್ತಬಾರದು. ಎಲ್ಲರೂ ಸಮಾನರು, ಎಲ್ಲರಿಗೂ ಗೌರವ ಸಲ್ಲಬೇಕು ಎಂಬ ಭಾವನೆ ಬಾಲ್ಯದಿಂದಲೇ ಮೂಡಿಸಬೇಕು ಎಂದು ಹೇಳಿದರು.

ಮಕ್ಕಳೇ ನಮ್ಮ ನಿಜವಾದ ಸಂಪತ್ತು:

ಮಕ್ಕಳು ಕುಟುಂಬದ ಆಸ್ತಿ ಮಾತ್ರವಲ್ಲ, ಸಮಾಜದ ಭವಿಷ್ಯವೂ ಹೌದು. ಅವರೇ ನಮ್ಮ ನಾಳಿನ ಭರವಸೆ, ದೇಶದ ಶಕ್ತಿ ಮತ್ತು ಸಮಾಜದ ನಿಜವಾದ ಸಂಪತ್ತು. ಮಕ್ಕಳಿಗೆ ಹಣ, ಆಸ್ತಿ, ಅಂತಸ್ತು ಗಳಿಸುವುದಕ್ಕಿಂತ ಉತ್ತಮ ಶಿಕ್ಷಣ, ಸಂಸ್ಕಾರ, ಮಾನವೀಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಕಲಿಸುವುದು ಮುಖ್ಯ ಎಂದು ತಿಳಿಸಿದರು.

ಸಮಾಜದಲ್ಲಿ ಉತ್ತಮ ಸ್ಥಾನ ಸಿಗಬೇಕೆಂಬುದೇ ಎಲ್ಲ ಪೋಷಕರ ಬಯಕೆ. ಇದು ಸಾಕಾರಗೊಳ್ಳಬೇಕಾದರೆ ಮಕ್ಕಳ ಕೈಯಲ್ಲಿ ಪುಸ್ತಕವಿರಲಿ, ಮನಸ್ಸಿನಲ್ಲಿ ಮಾನವೀಯತೆಯಿರಲಿ, ಹೃದಯದಲ್ಲಿ ಪ್ರೀತಿಯಿರಲಿ. ನಾವು ಮಕ್ಕಳಿಗೆ ಬಿಟ್ಟುಹೋಗುವ ಆಸ್ತಿ ಎಷ್ಟು ದೊಡ್ಡದಿದೆ ಎಂಬುದಕ್ಕಿಂತ, ಸಮಾಜಕ್ಕೆ ಎಂತಹ ವ್ಯಕ್ತಿತ್ವವನ್ನು ಕೊಡುಗೆಯಾಗಿ ನೀಡುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.

ಆಟ-ಪಾಠಕ್ಕೆ ಸಮಾನ ಆದ್ಯತೆ ನೀಡಿ:

ವಿದ್ಯಾರ್ಥಿ ಜೀವನ ಎನ್ನುವುದು ಸುವರ್ಣ ಯುಗವಿದ್ದಂತೆ. ಮಾಜಿ ಪ್ರಧಾನಿ ನೆಹರು ಅವರು ಹೇಳಿದಂತೆ ''''ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ''''. ಆದ್ದರಿಂದ ಮಕ್ಕಳು ಪಠ್ಯದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಪ್ರತಿಭಾ ಕಾರಂಜಿ ನಮ್ಮ ಸಂಸ್ಕೃತಿಯ ಹಬ್ಬ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಜೀವಂತವಾಗಿ ಇಡಬೇಕಿದೆ ಎಂದು ತಿಳಿಸಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ರಾಮನಗರ ಕ್ಷೇತ್ರದಲ್ಲಿ 5 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಸ್ಥಾಪಿಸಲಾಗುತ್ತಿದೆ. ಪಾದರಹಳ್ಳಿ ಮತ್ತು ಅವ್ವೇರಹಳ್ಳಿಯಲ್ಲಿ ಶಾಲೆಗಳು ಪ್ರಾರಂಭವಾಗಿವೆ. ಅದೇ ರಾಮನಗರ ಟೌನಿನಲ್ಲಿ ಹಳೇ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತಿಸಲಾಗುತ್ತಿದೆ. ನಗರದ ಸಣ್ಣಪುಟ್ಟ ಶಾಲೆಗಳ ಮಕ್ಕಳನ್ನು ಕೆಪಿಎಸ್ ಶಾಲೆಗೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ಸೋಲು-ಗೆಲುವು ಯಾರಿಗೂ ಶಾಶ್ವತ ಅಲ್ಲ:

ಎಂಎಲ್ಸಿ ರಂಗನಾಥ್ ಮಾತನಾಡಿ, ಮೊಬೈಲ್ ಗೀಳಿಗೆ ಜೋತು ಬಿದ್ದಿರುವ ಮಕ್ಕಳನ್ನು ಹೊರ ತಂದು ಪಠ್ಯದ ಜೊತೆಗೆ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸುವ ಪ್ರಯತ್ನ ನಡೆಯುತ್ತಿದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.

2018ರಲ್ಲಿ ಇಕ್ಬಾಲ್ ಹುಸೇನ್ ಸೋತಿದ್ದಾಗ, ವಿಧಾನ ಪರಿಷತ್ ಚುನಾವಣೆಯಲ್ಲಿ ನಾನೂ ಸೋತಿದ್ದೆ. ಕಳೆದ ಬಾರಿ ನಾನು ಸೋತಾಗ, ಗೆದ್ದ ವ್ಯಕ್ತಿಗೆ ಅಭಿನಂದಿಸಿ ಶಿಕ್ಷಣ ಸಚಿವರಾಗುವಂತೆ ಶುಭ ಹಾರೈಸಿದ್ದೆ. ಆದರೆ, ನನ್ನ ಸೋಲನ್ನು ಅಪಹಾಸ್ಯ ಮಾಡಿದರು. ಸೋಲು - ಗೆಲುವು ಯಾರಿಗೂ ಶಾಶ್ವತ ಅಲ್ಲ ಎಂದು ತಿಳಿಸಿದರು.

ಜಿಬಿಡಿಎ ಅಧ್ಯಕ್ಷ ಎಲ್. ಚಂದ್ರಶೇಖರ್ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಇಲ್ಲಿಂದ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿಯಾಗಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ ಎಂದರು.

ಈ ವೇಳೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಾಣೇಶ್, ನಗರಸಭೆ ಮಾಜಿ ಸದಸ್ಯ ಬೈರೇಗೌಡ ಮಾತನಾಡಿದರು. ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ರವಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಕುಮಾರ್ ಶಿಂಧೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹನುಮಯ್ಯ, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ................

ಕೆಪಿಎಸ್ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲಾಗುತ್ತಿದೆ. ಮಕ್ಕಳ ಪ್ರಗತಿಯ ಮೇಲೆ ನಿಗಾ ಇಡಲು ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ , ಮಾಸಿಕ ಪರೀಕ್ಷೆಗಳು, ರಿವಿಷನ್ ಮತ್ತು ಮಾಡೆಲ್ ಪೇಪರ್‌ಗಳ ಮೂಲಕ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ

- ಇಕ್ಬಾಲ್ ಹುಸೇನ್ , ಶಾಸಕರು. ರಾಮನಗರ ಕ್ಷೇತ್ರ

ಕೋಟ್ ..........

ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರನ್ನು ಜನಗಣತಿ, ಸಮೀಕ್ಷೆ ಅಥವಾ ವಿವಿಧ ಕ್ಲಬ್‌ಗಳಿಗೆ ಮೆಂಟರ್ ಆಗಿ ನೇಮಿಸಿದರೆ ಬಡ ಮಕ್ಕಳಿಗೆ ಪಾಠ ಮಾಡುವವರು ಯಾರು? ಆದ್ದರಿಂದ ಅನ್ಯ ಕಾರ್ಯಗಳಿಗೆ ಶಿಕ್ಷಕರ ನಿಯೋಜನೆ ನಿಲ್ಲಿಸಬೇಕು. ಅನುದಾನರಹಿತ ಶಾಲಾ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು.

-ರಂಗನಾಥ್, ವಿಧಾನ ಪರಿಷತ್ ಸದಸ್ಯರು

25ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ -2026 ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಳಕಲ್ಲಿಗೆ ಬಂತು ಕನ್ನಡ ಬಂಡಾರದ ರಥ
ಅಧಿವೇಶನ ಸಿದ್ಧತೆ ಹೆಸರಿನಲ್ಲಿ ಹಣ ದುರ್ಬಳಕೆ?