ಶಾಸ್ತ್ರೀಯ ಶಿಕ್ಷಣದಲ್ಲಿ ಜ್ಞಾನ ಪರಂಪರೆ ಅಡಕ

KannadaprabhaNewsNetwork |  
Published : Mar 28, 2025, 12:36 AM IST
ಫೋಟೋ ಮಾ.೨೭ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ಪಾಶ್ಚಿಮಾತ್ಯರ ವಿಷಯಾಧಾರಿತ ಶಿಕ್ಷಣ ವ್ಯವಸ್ಥೆ ಜೀವನ ಮೌಲ್ಯ ನೀಡುವುದಿಲ್ಲ.

ಯಲ್ಲಾಪುರ: ಪಾಶ್ಚಿಮಾತ್ಯರ ವಿಷಯಾಧಾರಿತ ಶಿಕ್ಷಣ ವ್ಯವಸ್ಥೆ ಜೀವನ ಮೌಲ್ಯ ನೀಡುವುದಿಲ್ಲ. ಆದರೆ ಭಾರತ ಜ್ಞಾನದ ನಾಡು. ಜ್ಞಾನ ಪರಂಪರೆ ನಮ್ಮ ಶಾಸ್ತ್ರೀಯ ಶಿಕ್ಷಣದಲ್ಲಿ ಅಡಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಶರ್ಮ ಹೇಳಿದರು.

ತಾಲೂಕಿನ ಉಮ್ಮಚಗಿಯ ಕಾಗಾರಕೊಡ್ಲಿನ ಸುಮೇರು ಜ್ಞೋತಿರ್ವಿಜ್ಞಾನ ಸಂಪ್ರತಿಷ್ಠಾನ, ಕುಮಟಾ ಹೆಗಡೆಯ ವೇದ ಸಂಸ್ಕೃತ ಅಕಾಡೆಮಿ ಹಾಗೂ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ "ಗುರುನಮನಂ ಶಾಸ್ತ್ರಚಿಂತನಮ್ " ವೇದ, ಜ್ಯೋತಿಷ್ಯ, ಆಯುರ್ವೇದ ವಿಷಯಗಳ ಕುರಿತಾಗಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕೃತಕ ಬುದ್ಧಿಮತ್ತೆಯ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ತೊಂದರೆ ಬಂದೀತು. ಅದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ ಎಂಬುದನ್ನು ಹೇಳಲಾಗದು. ಹಾಗಂತ ನಮ್ಮ ಪ್ರಾಚೀನ ವಿಷಯಗಳಾದ ವೇದ, ಸಂಸ್ಕೃತ, ಜ್ಯೋತಿಷ್ಯ, ಆಯುರ್ವೇದಗಳನ್ನು ಅಧ್ಯಯನ ಮಾಡಬೇಕಾದರೆ ಅಧ್ಯಾಪಕರು ಅನಿವಾರ್ಯ. ಆದರೆ ಆಧುನಿಕ ಜೀವನ ಶೈಲಿಗೆ ಹೊಂದಿಕೊಳ್ಳುತ್ತಾ ಇಂದು ಮಹಾನಗರಗಳಲ್ಲಿ ಒಂಟಿ ಜೀವನದತ್ತ ಸಾಗುತ್ತಿದ್ದೇವೆ ಎಂದರು.

ಸಂಸ್ಕೃತ ವಿಶ್ವಮಾನ್ಯವಾಗಿದೆ. ಅಂತೆಯೇ ಜ್ಯೋತಿಷ್ಯವೂ ವಿಶ್ವಮಾನ್ಯವಾಗಬೇಕು. ಆ ನೆಲೆಯಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಕೇಂದ್ರ ಪ್ರಕೃತಿಯ ಶಾಸ್ತ್ರೀಯ ರೂಪದಲ್ಲಿ ಸುಂದರ ತಾಣವನ್ನು ನಾಗೇಶ ಸ್ಥಾಪಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಖ್ಯಾತ ಜ್ಯೋತಿಷಿ ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ವೇದ ಎನ್ನುವುದೇ ಜ್ಞಾನ. ಅಂತಹ ಶಾಸ್ತ್ರಾಧ್ಯಯನಗಳ ಮೂಲಕ ಅದರಲ್ಲೂ ಜ್ಯೋತಿಷ್ಯದ ಹೆಚ್ಚಿನ ಅಧ್ಯಯನಕ್ಕೆ ಮಧ್ಯಪ್ರದೇಶ, ಮೈಸೂರಲ್ಲಿ ಮಾತ್ರ ಲಭ್ಯವಿತ್ತು. ಕೇವಲ ನಾಲ್ಕೈದು ವರ್ಷಗಳಲ್ಲಿ ನಾಗೇಶ ಸುಮೇರು ವನದಲ್ಲಿ ಎಲ್ಲ ಸಿದ್ಧಾಂತಗಳ ಗಣಿಯನ್ನಾಗಿ ರೂಪಿಸಿದ್ದಾರೆ ಎಂದರು.

ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಗಜಾನನ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲ ಭಾಷೆಗಳಿಗೂ ಪೂರಕವಾಗಿದೆ. ಕೇವಲ ಭಾಷೆಗಾಗಿ ಸಂಸ್ಕೃತ ಕಲಿತರೆ ಅದು ಉಳಿಯದು. ಇಂದು ನಾಟ್ಯ, ಯೋಗ, ಸಂಗೀತ, ಆಯುರ್ವೇದ ಎಲ್ಲ ಶಾಸ್ತ್ರಗಳೂ ನಮ್ಮಿಂದ ದೂರವಾಗುತ್ತಿವೆ. ಭಾಷಾಧ್ಯಯನಕ್ಕಾಗಿ ಪಾಠಶಾಲೆ ಸಲ್ಲ. ವೈದಿಕ ಶಿಕ್ಷಣ ಉಳಿಸುವಲ್ಲಿ ನಮ್ಮೆಲ್ಲ ಪಾಠಶಾಲೆಗಳು ಮುಂದಾಗಬೇಕು ಎಂದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀನಿವಾಸ ವರ್ಕೇರಿ, ಬೆಂಗಳೂರು ಉತ್ತರ ಪ್ರಾಂತದ ಉಪಕುಲಪತಿ ಡಾ.ನಿರಂಜನ ವಾನಳ್ಳಿ, ಕುವೆಂಪು ವಿವಿಯ ಡಾ.ಶರತ್ ಅನಂತಮೂರ್ತಿ ಅವರ ಸಂದೇಶವನ್ನು ಡಾ.ಮಹೇಶ ಭಟ್ಟ ವಾಚಿಸಿದರು.

ರಾಷ್ಟ್ರೀಯ ಪ್ರಶಸ್ತಿಗೆ ಪುರಸ್ಕೃತರಾದ ಕೆ.ಸಿ. ನಾಗೇಶ ಅವರ ಶಿಷ್ಯ ಸುಮಂತ ಅನಂತಮೂರ್ತಿ ಮಂಜಗುಣಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜ್ಯೋತಿಷ್ಯರತ್ನ ಪ್ರೊ.ಎಸ್.ಶ್ರೀನಿವಾಸ ಅಡಿಗ ಸಾಲಿಗ್ರಾಮ, ಜ್ಯೋತಿಷ್ಯ ಭಾಸ್ಕರ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಅಥರ್ವವೇದ ವೇದ ಸಂಸ್ಕೃತ ಅಕಾಡೆಮಿಯ ಅಧ್ಯಕ್ಷ ವಿ.ರಮೇಶ ವರ್ಧನ್, ಸಂಘಟಕರಲ್ಲೊಬ್ಬರಾದ ಡಾ.ಕೆ.ಸಿ. ನಾಗೇಶ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಕುಮಟಾದ ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಡಾ.ಗೋಪಲಾಕೃಷ್ಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ರವೀಂದ್ರ ಭಟ್ಟ ಸೂರಿ ಮತ್ತು ಡಾ.ಮಹೇಶ ಭಟ್ಟ ನಿರ್ವಹಿಸಿದರು. ಸುಮೇರು ಜ್ಯೋತಿರ್ವನದ ಅಧ್ಯಕ್ಷೆ ಡಾ.ನಿವೇದಿತಾ ಎಂ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ