ಗುರು ಇಲ್ಲದೇ ಅರಿವು ಅಸಾಧ್ಯ: ಮಹಾಂತ ಸ್ವಾಮಿಗಳು

KannadaprabhaNewsNetwork |  
Published : Jun 03, 2025, 12:19 AM IST
02ಎಎಸ್‌ವಿಆರ್‌04 | Kannada Prabha

ಸಾರಾಂಶ

ಪ್ರತಿಯೊಬ್ಬ ಮನುಷ್ಯನ ಬದುಕಿನ ಶ್ರೇಯಸ್ಸಿಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಗುರು ಇಲ್ಲದೇ ಅರಿವು ಅಸಾಧ್ಯ.

ಸವಣೂರು: ವ್ಯಕ್ತಿ ಶಕ್ತಿಯಾಗಿ ಬೆಳೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸತತ ಪರಿಶ್ರಮದ ಮುಖಾಂತರ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯಕ್ಕೆ ಪರಿವರ್ತನಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ ಎಂದು ಕಲ್ಮಠದ ಮಹಾಂತ ಸ್ವಾಮಿಗಳು ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ಲಲಾಟೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1993ರಿಂದ 2000ರ ವರೆಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ, ಸ್ನೇಹ ಸಂಗಮ ಸಂಭ್ರಮ ಸಮಾರಂಭ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬ ಮನುಷ್ಯನ ಬದುಕಿನ ಶ್ರೇಯಸ್ಸಿಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಗುರು ಇಲ್ಲದೇ ಅರಿವು ಅಸಾಧ್ಯ. ಗುರು ಬಾಳ ಬಾಂದಳಕ್ಕೆ ಬೆಳಕು ನೀಡುವ ಸೂರ್ಯ. ಅವರ ತ್ಯಾಗ, ಔದಾರ್ಯ, ವಾತ್ಸಲ್ಯ ಮತ್ತು ಪರಿಪಕ್ವತೆಯ ಬೋಧೆ ಸಾಮಾನ್ಯನನ್ನೂ ಅಸಾಮಾನ್ಯನನ್ನಾಗಿ ಮಾಡಬಲ್ಲದು. ನಮ್ಮ ಹೆಮ್ಮೆಯ ಶಿಕ್ಷಣ ಸಂಸ್ಥೆ ಹಲವಾರು ದಾಖಲಾತ್ಮಕ ಅಂಶಗಳಲ್ಲಿ ಮೇಲುಸ್ತರದಲ್ಲಿದ್ದು, ಅನೇಕರಿಗೆ ಹೆದ್ದಾರಿ ತೋರಿದೆ. ಇಲ್ಲಿ ಅಭ್ಯಾಸ ಮಾಡಿರುವ ಮಕ್ಕಳು ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಳೆಯ ನೆನಪು ಮಾಡಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ 1993- 2000ನೇ ಶೈಕ್ಷಣಿಕ ವಿದ್ಯಾರ್ಥಿಗಳು ಗುರುವಂದನಾ ನೆಪದಲ್ಲಿ ಮತ್ತೆ ಸೇರಿ ಕಾರ್ಯಕ್ರಮ ಮಾಡಿರುವುದು ಆದರ್ಶನೀಯ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿ ನಿಲ್ಲಬಲ್ಲದು ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗರಾಜ ಬಂಡಿವಡ್ಡರ ಮಾತನಾಡಿ, ಶಿಕ್ಷಣ ಕೇಂದ್ರಗಳು ಮಾನವ ವಿಕಾಸಕ್ಕೆ ಬೇಕಾದ ಬೆಳಕು ನೀಡುವಲ್ಲಿ ಮಾಡಿಕೊಂಡು ಬಂದಿರುವ ಕಾರ್ಯ ಅನನ್ಯವಾದುದು. ಈ ನಾಡಿನ ಮಠ- ಮಾನ್ಯಗಳು ಬಹು ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿವೆ. ಇಂತಹ ಸಂಸ್ಕಾರ ನೀಡುವ ಕ್ಷೇತ್ರಗಳಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಉನ್ನತ ಸ್ಥಾನದಲ್ಲಿ ಸೇವೆ ನೀಡುತ್ತಿರುವುದು ಸಂತೋಷ ಪಡುವ ವಿಷಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸಿ.ಜಿ. ಹಿರೇಮಠ ಮಾತನಾಡಿ, ಗುರುವಿನ ಸಂಸ್ಕಾರದ ಪರೀದಿಯಲ್ಲಿ ಶಿಕ್ಷಣ ಪಡೆದ ಶಿಷ್ಯನ ಬಾಳು ಉಜ್ವಲಗೊಳ್ಳುತ್ತದೆ. ಬದುಕಿಗೆ ಬೇಕಾದ ಲೌಕಿಕ ಮಾರ್ಗವನ್ನು ಗುರು ತೋರಬಲ್ಲ. ಗುರುವು ಶಿಷ್ಯನ ಸರ್ವ ವಿಧದ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಿ ಮುನ್ನುಡಿ ಬರೆಯುವ ನೇತಾರನಾಗಿದ್ದಾನೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ವಿ.ವಿ. ಗುಡಗೇರಿ, ಆರ್.ಎಸ್. ಪಾಟೀಲ, ಎಸ್.ಎನ್. ತಾಯಮ್ಮನವರ, ಎಲ್.ಎಂ. ದೇಸಾಯಿಮಠ, ಎಸ್.ಬಿ. ಗಂಗಣ್ಣವರ, ಬಿ.ಎಂ. ಆರಾಧ್ಯಮಠ, ಎಚ್.ಎಫ್. ದ್ಯಾವನಗೌಡ್ರ, ಗೀತಾ ಕಲಾಲ, ಶಿವಲೀಲಾ ಅಂಕಲಕೋಟಿ, ಸುರೇಖಾ ನೆರಲೀಕರ, ಅಂಜನಾ ಬುತ್ತಿ, ಶಂಕ್ರಪ್ಪ ಮುರಿಗೆಣ್ಣನವರ, ಸಿಪಾಯಿಗಳಾದ ಗಣೇಶ ಸಂಕ್ಲಿಪುರ, ಮಲ್ಲಪ್ಪ ಪೂಜಾರ ಹಾಗೂ ಅಗಲಿದ ಶಿಕ್ಷಕರ ಪರಿವಾರಕ್ಕೆ ಮತ್ತು ಸ್ನೇಹಿತರ ಪಾಲಕರಿಗೆ ಗೌರವಿಸಲಾಯಿತು. ಕವಿತಾ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು. ವೀರಣ್ಣ ಚರಂತಿಮಠ ಸ್ವಾಗತಿಸಿದರು. ಜಯಮ್ಮ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು. ಶಿಲ್ಪಾ ಅತ್ತಿಗೇರಿ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಶಾಲಾ ಕಾರ್ಯಾಲಯಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಪೀಠೋಪಕರಣಗಳನ್ನು ಕೊಡುಗೆ ನೀಡಿದರು. ಪ್ರಸ್ತುತ ಶಿಕ್ಷಕ ಸಮೂಹ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ