ಲೆಕ್ಕಪತ್ರವೆಂಬುದು ಕೇವಲ ವಾಣಿಜ್ಯ ವಿದ್ಯಾರ್ಥಿಗಳಿಗೆ ಅಥವಾ ಉದ್ಯಮಿಗಳಿಗೆ ಸೀಮಿತವಾದ ವಿಷಯವಲ್ಲ. ಪ್ರತಿಯೊಬ್ಬರೂ ತಮ್ಮ ಆದಾಯ, ವೆಚ್ಚ, ಉಳಿತಾಯ, ಹೂಡಿಕೆ ಮತ್ತು ಆರ್ಥಿಕ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲು ಲೆಕ್ಕಪತ್ರದ ಅರಿವು ಹೊಂದಿರಬೇಕು.
ರಾಣಿಬೆನ್ನೂರು: ಪ್ರತಿಯೊಬ್ಬ ವ್ಯಕ್ತಿಗೂ ಲೆಕ್ಕಪತ್ರದ ಜ್ಞಾನ ಅತ್ಯಗತ್ಯ ಎಂದು ದಾವಣಗೆರೆ ಜಿಲ್ಲೆಯ ಜಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್ ಬಾಬು ಎಸ್. ಹೇಳಿದರು.
ನಗರದ ಆರ್.ಟಿ.ಇ.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಲೆಕ್ಕಪತ್ರ ದಿನದ ಅಂಗವಾಗಿ ಏರ್ಪಡಿಸಿದ್ದ ಎಲ್ಲರಿಗೂ ಲೆಕ್ಕಪತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲೆಕ್ಕಪತ್ರವೆಂಬುದು ಕೇವಲ ವಾಣಿಜ್ಯ ವಿದ್ಯಾರ್ಥಿಗಳಿಗೆ ಅಥವಾ ಉದ್ಯಮಿಗಳಿಗೆ ಸೀಮಿತವಾದ ವಿಷಯವಲ್ಲ. ಪ್ರತಿಯೊಬ್ಬರೂ ತಮ್ಮ ಆದಾಯ, ವೆಚ್ಚ, ಉಳಿತಾಯ, ಹೂಡಿಕೆ ಮತ್ತು ಆರ್ಥಿಕ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲು ಲೆಕ್ಕಪತ್ರದ ಅರಿವು ಹೊಂದಿರಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯುಪಿಐ, ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ಪಾವತಿ, ಹೂಡಿಕೆ ಹಾಗೂ ಸಾಲದ ವ್ಯವಹಾರಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಹಣಕಾಸಿನ ವ್ಯವಹಾರಗಳನ್ನು ದಾಖಲಿಸುವುದು, ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹಾಗೂ ಉಳಿತಾಯದ ಮಹತ್ವ ಅರಿಯುವುದು ಅಗತ್ಯವಾಗಿದೆ. ಲೆಕ್ಕಪತ್ರವು ಕೇವಲ ಸಂಖ್ಯೆಗಳ ದಾಖಲೆಯಲ್ಲ. ಅದು ಆರ್ಥಿಕ ಶಿಸ್ತು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಯ ಪ್ರಮುಖ ಸಾಧನವಾಗಿದೆ. ಕುಟುಂಬದ ಬಜೆಟ್‌ನಿಂದ ಹಿಡಿದು ರಾಷ್ಟ್ರದ ಆರ್ಥಿಕ ನಿರ್ವಹಣೆಯವರೆಗೆ ಲೆಕ್ಕಪತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಹಣಕಾಸಿನ ಸಾಕ್ಷರತೆ, ಉಳಿತಾಯದ ಮನೋಭಾವ ಮತ್ತು ಹೂಡಿಕೆಯ ಅರಿವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸಂಜಯ್ ಸಾವುಕಾರ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ. ಎಸ್. ಕೆ. ಕೋಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪ್ರಾ. ಡಾ. ಆರ್.ಎಸ್. ರಡ್ಡೇರ, ಪ್ರೊ. ಪ್ರವೀಣ್ ಎನ್. ಎ. ಅಧ್ಯಕ್ಷತೆ ವಹಿಸಿದ್ದರು.
ಡಾ. ಸ್ವಪ್ನಾ ಮುಡುಗಲ್, ರಾಜಣ್ಣ ಪಿ., ರಾಜೇಶ್ವರಿ ಪಿ.ಐ., ಗೀತಾ ಹಾಗೂ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.