ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ನಿಂತ ಬೆಳೆಗಳ ರಕ್ಷಣೆಗಾಗಿ ನ. ೨೮ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಹಿಂದೆ ನ. ೧೫ರ ವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ ಬೆಳೆಗಳಿಗೆ ಇನ್ನೂ ನೀರಿನ ಅಗತ್ಯವಿದ್ದು, ನ. ೩೦ರ ವರೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಲಾಶಯದಲ್ಲಿನ ನೀರಿನ ಲಭ್ಯತೆ ಕುರಿತು ಚರ್ಚಿಸಿದರು.
ಸಭೆಯ ನಿರ್ಧಾರದಂತೆ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನ. ೨೧ರಿಂದ ೨೮ರ ವರೆಗೆ ಪ್ರತಿದಿನ ೩ ಸಾವಿರ ಕ್ಯೂಸೆಕ್ ನೀರು ಹರಿಸಲಾಗುವುದು. ಬಲದಂಡೆ ಕೆಳಮಟ್ಟದ ಕಾಲುವೆಗೆ ಇದೇ ಅವಧಿಯಲ್ಲಿ ೫೫೦ ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದೆ.ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ. ೨೧ರಿಂದ ೩೦ರ ವರೆಗೆ ನೀರು ಸ್ಥಗಿತಗೊಳಿಸಿ, ಡಿ. ೧ರಿಂದ ೮ರ ವರೆಗೆ ೧ ಸಾವಿರ ಕ್ಯುಸೆಕ್ ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ ನ. ೨೧ರಿಂದ ೩೦ರ ವರೆಗೆ ನೀರು ಸ್ಥಗಿತಗೊಳಿಸಿ, ಡಿ. ೧ರಿಂದ ೧೦ರ ವರೆಗೆ ೧೮೦ ಕ್ಯುಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ನಂತರ ಜ.೧೦ರ ವರೆಗೆ ನೀರು ಸ್ಥಗಿತಗೊಳಿಸಿ, ಜ. ೧೧ರಿಂದ ಮೇ ೩೧ರ ವರೆಗೆ ೧೦ ದಿನ ನೀರು ಹರಿಸಿ, ೧೦ ದಿನ ಸ್ಥಗಿತಗೊಳಿಸುವ ಪದ್ಧತಿ ಅನುಸರಿಸಲಾಗುವುದು.
ಪ್ರಸ್ತುತ ಎಲ್‌ನಿನೋ ಪರಿಣಾಮದಿಂದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹದಲ್ಲಿ ಕೊರತೆ ಎದುರಾಗಿದೆ. ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಂತೆ ಕುಡಿಯುವ ನೀರಿಗೆ ಕಾಯ್ದಿರಿಸಿದ ಪ್ರಮಾಣದಲ್ಲಿಯೇ ನಿಂತ ಬೆಳೆಗಳ ರಕ್ಷಣೆಗಾಗಿ ನೀರು ಹಂಚಿಕೆ ಮಾಡಲಾಗಿದೆ. ನ. ೨೮ರಂದು ಜಲಾಶಯದಲ್ಲಿ ಕರ್ನಾಟಕದ ಪಾಲಿಗೆ ೫.೫೦೦ ಟಿಎಂಸಿ ನೀರು ಲಭ್ಯವಿರುವ ನಿರೀಕ್ಷೆಯಿದ್ದು, ಅದನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಹಿಂಗಾರು ಬೆಳೆಗೆ ನೀರು ಹರಿಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ.