ಕನ್ನಡಜ್ಯೋತಿ ರಥದಿಂದ ಕನ್ನಡ ಸಂಸ್ಕೃತಿ ಅರಿವು: ತಹಸೀಲ್ದಾರ್‌ ಕೃಷ್ಣಮೂರ್ತಿ

KannadaprabhaNewsNetwork | Published : Nov 13, 2024 12:47 AM

ಸಾರಾಂಶ

ಕನ್ನಡ ನಾಡು, ನುಡಿ, ನೆಲ, ಜಲ, ಕನ್ನಡಾಭಿಮಾನ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಕಾಪಾಡುತ್ತ, ವಿಸ್ತಾರವಾಗಿ ಪಸರಿಸುವ ಜತೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡಜ್ಯೋತಿ ರಥವು ರಾಜ್ಯದಲ್ಲಿ ಸಂಚರಿಸುತ್ತಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು. ಹೊಳೆನರಸೀಪುರಕ್ಕೆ ಆಗಮಿಸಿದ ಕನ್ನಡಜ್ಯೋತಿ ರಥಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ರಥಕ್ಕೆ ಸ್ವಾಗತ

ಹೊಳೇನರಸೀಪುರ: ಕನ್ನಡ ನಾಡು, ನುಡಿ, ನೆಲ, ಜಲ, ಕನ್ನಡಾಭಿಮಾನ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಕಾಪಾಡುತ್ತ, ವಿಸ್ತಾರವಾಗಿ ಪಸರಿಸುವ ಜತೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡಜ್ಯೋತಿ ರಥವು ರಾಜ್ಯದಲ್ಲಿ ಸಂಚರಿಸುತ್ತಿದ್ದು, ನಮ್ಮ ತಾಲೂಕಿಗೆ ಆಗಮಿಸಿದ ಕನ್ನಡಜ್ಯೋತಿ ರಥವನ್ನು ಗೌರವಯುತವಾಗಿ ಸ್ವಾಗತಿಸಿ. ನಮ್ಮ ಭಾಷಾಭಿಮಾನವನ್ನು ಹೆಮ್ಮೆಯಿಂದ ವ್ಯಕ್ತಪಡಿಸಿದ್ದೇವೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಶ್ರೀ ಬಾಬು ಜಗಜೀವನ ರಾಮ್ ವೃತ್ತದ ಸಮೀಪ ತಾಲೂಕಿಗೆ ಆಗಮಿಸಿದ ಕನ್ನಡಜ್ಯೋತಿ ರಥಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಮಂಡ್ಯದಲ್ಲಿ ಡಿಸೆಂಬರ್ ೨೦ರಿಂದ ೩ ದಿನ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ, ಕನ್ನಡಾಭಿಮಾನ ಹಾಗೂ ಸಂಸ್ಕೃತಿಯ ರಕ್ಷಣೆ ಹಾಗೂ ಪಾಲನೆಗೆ ಇರುತ್ತೇವೆ ಎಂಬುದನ್ನು ಸಾರಬೇಕಿದೆ ಎಂದರು.

ಮುಂದಿನ ವರ್ಷಗಳಲ್ಲಿ ಹಾಸನ ಜಿಲ್ಲೆಯ ಸಾಹಿತಿಯೊಬ್ಬರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂಬುದು ನನ್ನ ಆಸೆ. ಶ್ರೀ ಲಕ್ಷ್ಮಿನರಸಿಂಹಸ್ವಾಮಿಯವರ ಕೃಪೆಯಿಂದ ನನ್ನಾಸೆ ಈಡೇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ, ಪುರಸಭೆ ಸದಸ್ಯ ಕುಮಾರಸ್ವಾಮಿ, ವಾಗ್ಮಿ ಡ್ಯಾನಿ ಫಿರೇರಾ, ಸಾಹಿತ್ಯ ಪರಿಷತ್ ಸದಸ್ಯರಾದ ಶಂಕರ ನಾರಾಯಣ ಐತಾಳ್, ಮುರಳಿಧರಗುಪ್ತ, ಮಂಜುನಾಥ್, ಶಿವಕುಮಾರಚಾರ್, ನರಸಿಂಹಶೆಟ್ಟಿ, ಕುಮುದಾ ರಂಗನಾಥ, ಮುಖ್ಯ ಶಿಕ್ಷಕ ಕಾಳೇಗೌಡ, ಪುರಸಭೆ ಅಧಿಕಾರಿಗಳಾದ ಪಂಕಜಾ ಹಾಗೂ ರಮೇಶ್, ದೈಹಿಕ ಶಿಕ್ಷಕ ಪರಿವೀಕ್ಷಕ ಮಹೇಶ್, ಇಸಿಒ ಕಾಂತರಾಜಪ್ಪ, ಶಿಕ್ಷಕ ಮಹೇಶ್, ಯೋಗ ಶಿಕ್ಷಕಿ ಪ್ರೇಮ ಮಂಜುನಾಥ್ ಇದ್ದರು.

Share this article