ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಅತ್ಯವಶ್ಯಕ: ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್

KannadaprabhaNewsNetwork |  
Published : Feb 21, 2025, 12:49 AM IST
20ಕೆಎಂಎನ್ ಡಿ22 | Kannada Prabha

ಸಾರಾಂಶ

ಇದೇ ವೇಳೆ ಹರಿದ್ವಾರದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಶಾಲು, ಹಾರ, ಮೈಸೂರುಪೇಟ ಹಾಕಿ, ಪ್ರಶಸ್ತಿ ಪದಕವನ್ನೊಳಗೊಂಡ ಸ್ಮರಣಿಕೆ ಸೇರಿದಂತೆ 5 ಲಕ್ಷ ರು. ನಗದು ನೀಡಿ ಅತ್ಯಂತ ಗೌರವದಿಂದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ಡಾ.ನಿರ್ಮಲಾನಂದನಾಥಶ್ರೀಗಳು ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನ ಮಾನವನ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ ಎಂದು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಭವನದಲ್ಲಿ ಗುರುವಾರ ನಡೆದ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ 12 ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಅಂತರ್ ಸತ್ವದ ಜ್ಞಾನ ಅಧ್ಯಾತ್ಮವಾದರೆ, ಬಾಹ್ಯ ಪ್ರಕೃತಿಯ ಜ್ಞಾನವೇ ವಿಜ್ಞಾನ. ಪ್ರಕೃತಿ ಮನುಷ್ಯನಿಗೆ ಬುದ್ಧಿಶಕ್ತಿಯ ಜ್ಞಾನವನ್ನು ನೀಡಿದೆ. ಈ ಜ್ಞಾನವನ್ನು ಬಳಸಿಕೊಂಡು ಮನುಷ್ಯ ತನ್ನ ಅಂತರ್ ಸತ್ವವನ್ನು ಕಂಡುಕೊಳ್ಳಬೇಕು. ಪ್ರಕೃತಿಯ ಬಾಹ್ಯ ಶಕ್ತಿಯನ್ನು ಅರಿಯಲು ವಿಜ್ಞಾನ ನೇರವಾಗುತ್ತದೆ ಎಂದರು.

ಆದಿಚುಂಚನಗಿರಿ ಮಠವನ್ನು ವಿಶ್ವವ್ಯಾಪಿಯಾಗಿ ಬೆಳೆಸುವಲ್ಲಿ ಶ್ರೀಗಳ ಕೊಡುಗೆ ಅಪಾರ. ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ವಿಜ್ಞಾತಂ ಪ್ರಶಸ್ತಿಯನ್ನು ನೀಡುವ ಮೂಲಕ ಪೂಜ್ಯರು ಉತ್ತರ ಮತ್ತು ದಕ್ಷಿಣ ಭಾರತದ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದ್ದಾರೆ. ಅಂತರ್ ಸತ್ಯದ ಅನ್ವೇಷಣೆ ಮಾಡುವುದು ಜ್ಞಾನ. ಅಂತಹ ಜ್ಞಾನ ಪ್ರಸಾರದಲ್ಲಿ ತೊಡಗಿಕೊಂಡಿರುವ ಶ್ರೀ ಅವಧೇಶಾನಂದ ಸ್ವಾಮೀಜಿರವರಿಗೆ ವಿಜ್ಞಾತಂ ಪ್ರಶಸ್ತಿ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ವಿಜ್ಞಾತಂ ಪ್ರಶಸ್ತಿ ಸ್ವೀಕರಿಸಿದ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಆಶೀರ್ವಚನ ನೀಡಿ, ಭೈರವೈಕ್ಯ ಡಾ. ಬಾಲಗಂಗಾಧರನಾಥಶ್ರೀಗಳ ಸಂಕಲ್ಪ ಲೋಕಕಲ್ಯಾಣವಾಗಿತ್ತು. ಜನ ಮಾನಸದಲ್ಲಿ ವಿದ್ಯೆ- ಬುದ್ಧಿ- ಸಿದ್ಧಿಗಳನ್ನು ಬಿತ್ತಿದ್ದಾರೆ. ಸರ್ವರ ಆತ್ಮ ಕಲ್ಯಾಣಕ್ಕಾಗಿ ಶ್ರಮಿಸಿ ಭುವಿಯ ಮೇಲಿನ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಅಂಥ ಪುಣ್ಯ ಪುರುಷರು ನೆಲೆಸಿರುವ ಪುಣ್ಯಭೂಮಿ ಶ್ರೀ ಆದಿಚುಂಚನಗಿರಿ ಕ್ಷೇತ್ರ ಇಂದು ಅವರ ಪ್ರಿಯ ಶಿಷ್ಯರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಶ್ರದ್ಧೆಯಿಂದಾಗಿ ಮಹೋನ್ನತವಾಗಿ ಬೆಳಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳು ಆಶೀರ್ವಚನ ನೀಡಿ, 1800 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಠದ 71ನೇ ಪೀಠಾಧ್ಯಕ್ಷರಾಗಿ ಬಂದ ಪೂಜ್ಯ ಶ್ರೀ ಗುರು ಬಾಲಗಂಗಾಧರನಾಥ ಸ್ವಾಮೀಜಿ ಅವರು ಶ್ರೀಮಠವನ್ನು ಅಭೂತ ಪೂರ್ವವಾಗಿ ಬೆಳೆಸಿದ ನಂತರ ಇದ್ಯಾವುದನ್ನು ನಾನು ಮಾಡಲಿಲ್ಲ. ಎಲ್ಲವನ್ನೂ ಶ್ರೀ ಕಾಲಭೈರವನೇ ಭಕ್ತರ ಮೂಲಕ ಮಾಡಿಸಿದ್ದಾನೆಂದು ಹೇಳುತ್ತಿದ್ದರು ಎಂದರು.

ಎಲ್ಲರೂ ಇಂದು ಆಧುನಿಕತೆಯ ಬೆನ್ನತ್ತುತ್ತಿರುವುದು ತಪ್ಪಲ್ಲ. ಇಂದಿನ ಆಧುನಿಕ ಬದುಕಿಗೆ ವಿಜ್ಞಾನ ಮತ್ತು ಅದಕ್ಕೆ ಪೂರಕವಾದ ಸೌಲಭ್ಯಗಳೂ ಬೇಕು. ಆದರೆ, ವಿಜ್ಞಾನದ ಜೊತೆ ಜ್ಞಾನವಿಲ್ಲದೆ ಆತನ ಬಾಳು ಬರಡಾಗುತ್ತದೆ. ವಿಜ್ಞಾನದ ಜೊತೆಗೆ ಜ್ಞಾನವೂ ಇದ್ದರೆ ಅವನ ಬದುಕು ಬಂಗಾರವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಪ್ರಜ್ಞೆ ಮೂಡಿಸಲು ಜ್ಞಾನ ಹೇಗೆ ಅವಶ್ಯಕವೊ ಅದೇ ರೀತಿ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣವನ್ನು ಸಾಧಿಸಲು ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಈ ಮೂರು ಅವಶ್ಯಕ ಎಂದು ತಿಳಿಸಿದರು.

ಗುಜರಾತ್‌ನ ರಾಜ್‌ಕೋಟ್ ಆರ್ಷ ವಿದ್ಯಾಮಂದಿರದ ಅಧ್ಯಕ್ಷ ಶ್ರೀ ಸ್ವಾಮಿ ಪರಮಾತ್ಮಾನಂದ ಸರಸ್ವತಿಜೀ ಅವರು ಸಮಾರಂಭವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.

ವಿಜ್ಞಾತಂ ಪ್ರಶಸ್ತಿ ಪ್ರದಾನ:

ಇದೇ ವೇಳೆ ಹರಿದ್ವಾರದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಶಾಲು, ಹಾರ, ಮೈಸೂರುಪೇಟ ಹಾಕಿ, ಪ್ರಶಸ್ತಿ ಪದಕವನ್ನೊಳಗೊಂಡ ಸ್ಮರಣಿಕೆ ಸೇರಿದಂತೆ 5 ಲಕ್ಷ ರು. ನಗದು ನೀಡಿ ಅತ್ಯಂತ ಗೌರವದಿಂದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ಡಾ.ನಿರ್ಮಲಾನಂದನಾಥಶ್ರೀಗಳು ಪ್ರದಾನ ಮಾಡಿದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥಸ್ವಾಮೀಜಿ, ಕುಂಬಳಗೂಡು ಶಾಖಾ ಮಠದ ಪ್ರಕಾಶನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎ.ಶೇಖರ್, ಕುಲಸಚಿವ ಡಾ. ಸಿ.ಕೆ. ಸುಬ್ಬರಾಯ, ಮಾಜಿ ಉಪಕುಲಪತಿ ಚಂದ್ರಶೇಖರಶೆಟ್ಟಿ, ದೇವರಾಜ ಅರಸು ವಿಶ್ವವಿದ್ಯಾಲಯ ಡಾ.ವಿ.ಎಲ್.ಎನ್.ಪ್ರಸಾದ್, ಕೆಪಿಎಸ್‌ಸಿ ಮಾಜಿ ಸದಸ್ಯ ಎಚ್.ಎನ್.ಕೃಷ್ಣ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಸಚ್ಚಿದಾನಂದ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ