ಪಿ.ಎಸ್. ಪಾಟೀಲ
ರೋಣ/ಹೊಳೆಆಲೂರ: ತಾಲೂಕಿನ ಹೊಳೆಮಣ್ಣೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾರ ಮನೆಯಲ್ಲಾದರೂ ಮರಣ ಸಂಭವಿಸಿದರೆ ಆ ಮನೆಯ ಹತ್ತಿರ ಜ್ಞಾನ ಶ್ರದ್ಧಾಂಜಲಿ ಬಯಲು ವಾಚನಾಲಯ ತೆರೆದುಕೊಳ್ಳುತ್ತದೆ!ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಜನರಲ್ಲಿ ಪುಸ್ತಕ, ಪೇಪರ್ ಓದುವ ಹವ್ಯಾಸ ಹೆಚ್ಚಿಸುವಲ್ಲಿ ಹೊಳೆಮಣ್ಣೂರು ಗ್ರಾಪಂ ವಿಶಿಷ್ಟ, ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದೆ.
ಗ್ರಾಪಂ ವ್ಯಾಪ್ತಿಯ ಗಾಡಗೋಳಿ, ಹೊಳೆಮಣ್ಣೂರ ಗ್ರಾಮದಲ್ಲಿ ಯಾರಾದರೂ ಮೃತರಾದಲ್ಲಿ ಆ ಮನೆಯ ಹತ್ತಿರದಲ್ಲಿನ ಬಯಲು ಜಾಗದಲ್ಲಿ ಜ್ಞಾನ ಶ್ರದ್ಧಾಂಜಲಿ ಬಯಲು ವಾಚನಾಲಯ ಆಗಮಿಸುತ್ತದೆ. ಅಲ್ಲಿ ಸುಮಾರು 25ಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಿವಿಧ ಸದಭಿರುಚಿಯ ಜ್ಞಾನಾಭಿವೃದ್ಧಿ ಮೂಡಿಸುವ ಪುಸ್ತಕ, ದಿನಪತ್ರಿಕೆಗಳು, ವಾರ, ಪಾಕ್ಷಿಕ, ಮಾಸಪತ್ರಿಕೆಗಳನ್ನು ಬಯಲು ವಾಚನಾಲಯದಲ್ಲಿ ಇಡಲಾಗುತ್ತದೆ. ಜತೆಗೆ ಶುದ್ಧ ನೀರನ್ನು ಕೊಡಲಾಗುತ್ತದೆ. ಇಂಥದ್ದೊಂದು ವಿಶಿಷ್ಟ ಯೋಜನೆಯು ಸದ್ದಿಲ್ಲದೇ ಕಳೆದ ಒಂದು ವರ್ಷದಿಂದ ಹೊಳೆಮಣ್ಣೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ.ಜ್ಞಾನ ಶ್ರದ್ಧಾಂಜಲಿ ಯಶಸ್ವಿ: ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಜನ ಅನಗತ್ಯವಾಗಿ ಮೊಬೈಲ್ ನೋಡುವುದು, ಇಸ್ಪೀಟ್, ಜೂಜಾಟದಂಥ ಕಾನೂನುಬಾಹಿರ ಚಟುವಟಿಕಯಲ್ಲಿ ತೊಡಗದಂತೆ, ಪುಸ್ತಕ, ಪತ್ರಿಕೆ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಹೊಳೆಮಣ್ಣೂರ ಗ್ರಾಪಂ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ ಯಶಸ್ಸಿಗೆ ಪಿಡಿಒ ಶಿವನಗೌಡ ಮೆಣಸಗಿ, ಗ್ರಾಪಂ ಅಧ್ಯಕ್ಷೆ ಸುಜಾತ ಮಠಪತಿ, ಉಪಾಧ್ಯಕ್ಷರು, ಸರ್ವ ಸದಸ್ಯರ ಶ್ರಮ ಅಪಾರವಿದೆ. ಜತೆಗೆ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಗಾಣಿಗೇರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿದ್ದು, ಅಗತ್ಯ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. ಸಂತಸ: ಪಿಡಿಒ ಶಿವನಗೌಡ ಮೆಣಸಗಿ ಅವರ ಇಚ್ಛಾಶಕ್ತಿ, ಆಡಳಿತ ಮಂಡಳಿ ಸಹಕಾರದಿಂದ ಜ್ಞಾನ ಶ್ರದ್ಧಾಂಜಲಿ ಬಯಲು ವಾಚನಾಲಯ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಪಂಚಾಯಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಸಂತಸ ತಂದಿದೆ ಎಂದು ಗ್ರಾಪಂ ಅಧ್ಯಕ್ಷರಾದ ಸುಜಾತಾ ಮಲ್ಲಯ್ಯ ಮಠಪತಿ ತಿಳಿಸಿದರು.ವಿನೂತನ ಕಾರ್ಯಕ್ರಮ: ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸರ್ವ ಸದಸ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ, ಬೆಂಬಲ, ತಾಪಂ ಇಒ ಚಂದ್ರಶೇಖರ ಕಂದಕೂರ ಅವರ ಪ್ರೋತ್ಸಾಹದಿಂದ ವಿನೂತನ ಕಾರ್ಯಕ್ರಮಗಳು ಸಾಕಾರಗೊಳ್ಳಲು ಸಾಧ್ಯವಾಯಿತು ಎಂದು ಪಿಡಿಒ ಶಿವನಗೌಡ ಜಿ. ಮೆಣಸಗಿ ತಿಳಿಸಿದರು.ಓದುವ ಹವ್ಯಾಸ: ಜನರಲ್ಲಿ ಓದುವ ಹವ್ಯಾಸ ಬೆಳೆಸಲು, ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಜನತೆ ಅನಗತ್ಯ ಮೊಬೈಲ್ ನೋಡುತ್ತಾ ಕುಳಿತುಕೊಳ್ಳದಂತೆ ಪುಸ್ತಕ, ಪತ್ರಿಕೆ ಓದಿ ಜಾಗತಿಕ ವಿದ್ಯಮಾನ ತಿಳಿಯುವಂತಾಗಲು, ಜ್ಞಾನ ವೃದ್ಧಿಗಾಗಿ ಹೊಳೆಮಣ್ಣೂರ ಗ್ರಾಪಂ ಪಿಡಿಒ ಶಿವನಗೌಡ ಮೆಣಸಗಿ ಹಾಗೂ ಅಲ್ಲಿನ ಆಡಳಿತ ಮಂಡಳಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಾಪಂ ಇಒ ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.ನಾನು ಓದಿದ ಪುಸ್ತಕ , ಮತ್ತೊಂದು ಕಾರ್ಯಕ್ರಮ
ಹೊಳೆಮಣ್ಣೂರ ಗ್ರಾಪಂ ಸದಾ ಒಂದಿಲ್ಲೊಂದು ವಿಶಿಷ್ಟ ಕಾರ್ಯಕ್ರಮ ಮೂಲಕ ಗಮನ ಸೆಳೆಯುತ್ತಿದ್ದು, ಇದರಲ್ಲಿ ಶಾಲಾ ಮಕ್ಕಳಿಗಾಗಿ ನಾ ಓದಿದ ಪುಸ್ತಕ ಕಾರ್ಯಕ್ರಮ ಒಂದಾಗಿದೆ. ಶಾಲಾ ಮಕ್ಕಳ ಜ್ಞಾನ ವೃದ್ಧಿ, ಭಾಷಣ ಕೌಶಲ್ಯ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಅರಿವು ಕೇಂದ್ರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಮಣ್ಣೂರ, ಗಾಡಗೋಳಿ ಗ್ರಾಮದಲ್ಲಿನ 3 ಶಾಲೆಯ ಎಲ್ಲ ಮಕ್ಕಳಿಗೆ ಅಗತ್ಯವಿರುವ ಪುಸ್ತಕಗಳನ್ನು ಎರವಲು ಪಡೆಯಲು ಸಹಾಯವಾಗುವಂತೆ ಉಚಿತ ನೋಂದಣಿ ಮಾಡಿಕೊಳ್ಳಲಾಗಿದೆ.ಹೀಗೆ ಗ್ರಾಪಂದಿಂದ ಎರವಲು ಒಡೆದ ಪುಸ್ತಕವನ್ನು ಮಕ್ಕಳು ಓದುತ್ತಾರೆಯೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಪ್ರತಿ ಗುರುವಾರ ಆಯಾ ಶಾಲೆಯಲ್ಲಿ ಸಂಜೆ 4ರಿಂದ 5 ಗಂಟೆಯವರೆಗೆ ನಾನು ಓದಿದ ಪುಸ್ತಕ ಸರಣಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಕ್ಕಳು ಈ ಕಾರ್ಯಕ್ರಮದಲ್ಲಿ ತಾವು ಓದಿದ ಪುಸ್ತಕದ ಕುರಿತು 5 ನಿಮಿಷದ ಅವಧಿಯಲ್ಲಿ ಮಾಹಿತಿ ನೀಡುತ್ತಾರೆ.