ಶಿರಹಟ್ಟಿ: ಕೆಲವು ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಕನ್ಹೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲೆ ಪ್ರವೇಶ ನಿರ್ಬಂಧಿಸಿದ್ದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕದ ವತಿಯಿಂದ ಸಂತೋಷ ಕುರಿ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘಟನೆ ಮುಖಂಡ ಸಂತೋಷ ಕುರಿ ಮಾತನಾಡಿ, ರಾಜಕಾರಣಿಗಳು ಹೇಳಿದ ಮಾತ್ರಕ್ಕೆ ಅಧಿಕಾರಿಗಳು ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧಿಸಿರುವುದು ಸರಿಯಲ್ಲ. ಕೂಡಲೇ ಅಧಿಕಾರಿಗಳು ಈ ಆದೇಶವನ್ನು ವಾಪಸ್ ಪಡೆಯಬೇಕು. ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ಈ ರೀತಿಯ ಆದೇಶ ಹೊರಡಿಸಿರುವುದು ಸರಿಯಲ್ಲ. ಈ ಆದೇಶ ವಾಪಸ್ ಪಡೆಯದೇ ಹೋದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ದೇಶ ಕಂಡ ಶ್ರೇಷ್ಠ ಸ್ವಾಮೀಜಿಗಳಲ್ಲಿ ಒಬ್ಬರಾದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಭಕ್ತಕುಲದ ಅತ್ಯುತ್ತಮ ಕಾರ್ಯಗಳಾದ ಗೋಶಾಲೆ, ಅನಾಥಾಶ್ರಮ, ವಯೋವೃದ್ಧರಿಗೆ ಮಾಸಾಶನ, ಅನಾಥ ಮಕ್ಕಳಿಗೆ ಊಟ, ವಸತಿ, ಶಿಕ್ಷಣ, ಗುರುಕುಲ ಹಾಗೂ ಸಾವಯವ ಕೃಷಿಯ ಮೂಲಕ ಭಾರತದ ಕೃಷಿಕ ಸಂಪತ್ತನ್ನು ಶ್ರೀಮಂತಗೊಳಿಸಿದ ಪರಮಪೂಜ್ಯರನ್ನು ರಾಜ್ಯದ ಅನೇಕ ಜಿಲ್ಲೆಗಳಿಂದ ನಿರ್ಬಂಧಿಸಿರುವುದು ಸೂಕ್ತವಲ್ಲ ಎಂದರು.ಹಿಂದೂ ಧರ್ಮದ ಪರವಾಗಿ ಮಾತನಾಡುವುದು ಅಪರಾದವೇ? ರಾಜ್ಯ ಸರ್ಕಾರದ ಕೆಲವು ನೀತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯ ಹಂಚಿಕೊಂಡ ಮಾತ್ರಕ್ಕೆ ಶ್ರೀಗಳಿಗೆ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಸರ್ಕಾರ ಶ್ರೀಗಳಿಗೆ ದೊಡ್ಡ ಅಪಮಾನ ಮಾಡಿ, ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ನಡೆದುಕೊಂಡಿದೆ ಎಂದರು.ಲಿಂಗಾಯತ ಮಠಾಧಿಪತಿಗಳ ವಿರುದ್ದ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದಾರೆ ಎಂಬ ಹಿನ್ನೆಲೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ ಜಿಲ್ಲಾ ಪ್ರವೇಶಿಸಬಾರದೆಂಬ ಆದೇಶ ಸರಿಯಲ್ಲ. ವಿಜಯಪುರ ಬಳಿಕ ಬಾಗಲಕೋಟಿ ಪ್ರವೇಶಕ್ಕೂ ನಿರ್ಬಂಧ ಹೇರಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ದೂರಿದರು.ಸಂತರನ್ನು ಮುಟ್ಟಿದವರು ಯಾರು ಉಳಿದಿಲ್ಲ. ಜನ ಕಳಕಳಿಯ ಮತ್ತು ಸಮಾಜಮುಖಿ ಸಂತ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಶ್ರೀಗಳ ಜಿಲ್ಲಾ ನಿಷೇಧ ಹೇರುವ ಮೂಲಕ ಸರ್ಕಾರ ತನ್ನ ನೀಚ ಪ್ರವೃತ್ತಿ ಮುಂದುವರಿಸಿದೆ ಎಂದು ಆರೋಪಿಸಿದರು.ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪರಶುರಾಮ ಡೊಂಕಬಳ್ಳಿ, ಶಶಿಕುಮಾರ ಪೂಜಾರ, ಅರುಣಕುಮಾರ ತಿರ್ಲಾಪೂರ, ಬಸವರಾಜ ಕಲ್ಯಾಣಿ, ಪ್ರಕಾಶ ಶೇಳಕೆ, ವೀರಣ್ಣ ಅಂಗಡಿ, ದೇವಪ್ಪ ಪೂಜಾರ, ಆನಂದ ಸ್ವಾಮಿ, ರವಿ ಜಾಧವ, ದೇವಪ್ಪ ಪವಾರ, ಸಂತೋಷ ತೋಡೇಕಾರ ಇತರರು ಇದ್ದರು.