ಶಿರಹಟ್ಟಿ: ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶ ಮತ್ತು ಧೈರ್ಯ, ಸಾಹಸ ಯುವ ಸಮೂಹಕ್ಕೆ ಮಾದರಿ. ಕಿತ್ತೂರು ರಾಣಿ ಚೆನ್ನಮ್ಮ ಕನ್ನಡದ ಆಸ್ತಿ. ಕನ್ನಡಮ್ಮನ ಹೆಸರು ವಿಶ್ವವ್ಯಾಪಿ ಮುಟ್ಟಿಸಿದ ವೀರವನಿತೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಮಹಿಳೆ ಚೆನ್ನಮ್ಮ ಎಂದರು.ಚೆನ್ನಮ್ಮನ ಬಲಗೈ ಬಂಟನಂತೆ ಇದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ತಾಯಿ ನಾಡಿಗೆ ಅಮೋಘ ಸೇವೆ ಸಲ್ಲಿಸಿ ಕಿತ್ತೂರು ಸಂಸ್ಥಾನದ ಹೆಸರು ಅಮರವಾಗಿ ಉಳಿಯುವಂತೆ ಮಾಡಿದರು. ಯುವಕರು ಈ ಸಂಸ್ಥಾನದ ಇತಿಹಾಸ ತಿಳಿದು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದರು.ಸ್ತ್ರೀಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಚೆನ್ನಮ್ಮನೇ ಪ್ರೇರಣೆ. ಹೀಗಾಗಿ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ. ಚೆನ್ನಮ್ಮ ಕೋಮು, ಸೌಹಾರ್ದತೆ ಮೆರೆದರು. ಚಿಕ್ಕ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಬಿಲ್ವಿದ್ದೆ ಕರಗತ ಮಾಡಿಕೊಂಡಿದ್ದರು. ಹೀಗಾಗಿ ವೈರಿಗಳನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಚೆನ್ನಮ್ಮನಲ್ಲಿತ್ತು ಎಂದು ಸ್ಮರಿಸಿದರು.ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ತುಳಿ ಮಾತನಾಡಿ, ಚೆನ್ನಮ್ಮನವರು ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವರು. ಸ್ವಾತಂತ್ರ್ಯ ಸ್ವಾಭಿಮಾನಿಗಳ ಸಾಕಾರಮೂರ್ತಿ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಪುಟ್ಟ ರಾಜ್ಯದ ಸ್ವತಂತ್ರ್ಯ ರಕ್ಷಣೆಗೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟ ಅಲ್ಲಿ ತೋರಿಸಿದ ಧೈರ್ಯ, ಸಾಹಸದಿಂದ ಚೆನ್ನಮ್ಮ ಅಜರಾಮರರಾಗಿದ್ದಾರೆ ಎಂದರು.ಇತಿಹಾಸದಿಂದ ತಿಳಿದುಕೊಂಡಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಸೇರಿ ಅನೇಕರ ಪಾತ್ರ ಮುಖ್ಯವಾಗಿದೆ. ಜಯಂತಿ, ವಿಜಯೋತ್ಸವ ಆಚರಿಸುವುದರಿಂದ ಪ್ರತಿಯೊಬ್ಬರಲ್ಲಿ ದೇಶಪ್ರೇಮ ಹಾಗೂ ಸಾಹಸ ಹೆಚ್ಚಾಗುತ್ತದೆ ಎಂದರು.ಶಿರಸ್ತೇದಾರ ಗಿರಿಜಾ ಪೂಜಾರ, ಎಸ್.ಬಿ. ಹೊಸೂರ, ಎಂ.ಕೆ. ಲಮಾಣಿ, ಸಂತೋಷ ಕುರಿ, ಎಂ.ಎ. ಪಾಟೀಲ, ಎಸ್.ಎಸ್. ಪಾಟೀಲ, ಮಲ್ಲಿಕಾರ್ಜುನ ಕಬಾಡಿ, ವಿನೋದ ಪಾಟೀಲ ಹಾಗೂ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಇದ್ದರು.