ವಿದ್ಯಾರ್ಥಿಗಳಿಗೆ ಜ್ಞಾನ-ಕೌಶಲಗಳೇ ಬಲ: ಶ್ರೀಧರ್

KannadaprabhaNewsNetwork | Published : Jun 25, 2024 12:37 AMUpdated   : Jun 25 2024, 12:38 AM IST
22 | Kannada Prabha

ಸಾರಾಂಶ

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜತೆಗೆ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಿಗೆ ಜ್ಞಾನ-ಕೌಶಲಗಳೇ ಬಲ ಎಂದು ನಗರಪಾಲಿಕೆ ಮಾಜಿ ಸದಸ್ಯ, ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಶ್ರೀಧರ್ ಅಭಿಪ್ರಾಯಪಟ್ಟರು.

ವಿಜಯನಗರ ಒಂದನೇ ಹಂತದ ರೈಲ್ವೆ ಬಡಾವಣೆಯಲ್ಲಿರುವ ಕೊಡಗು ಗೌಡ ಸಮುದಾಯ ಭವನದಲ್ಲಿ ಹೆಬ್ಬಾಳಿನ ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು? ಎಂಬ ವಿಷಯದ ಮೇಲೆ ನಡೆದ ಶಿಕ್ಷಣ ಕ್ಷೇತ್ರದ ತಜ್ಞರಿಂದ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜತೆಗೆ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ಪೋಷಕರಿಗೆ ಶಿಕ್ಷಣ ಕ್ಷೇತ್ರದ ತಜ್ಞರಿಂದ ಸಲಹೆ ಕೊಡಿಸಿ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನೆರವು ನೀಡಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ವಾಗ್ನಿಗಳೂ ಆದ ಪ್ರೊ. ನಾಗಣ್ಣ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯದ ಜತೆಗೆ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮುಂದಿನ ಜೀವನದಲ್ಲಿ ಉತ್ತಮ ನೆಲೆ ಕಂಡುಕೊಳ್ಳಲು ಸಾಧ್ಯ. ಪೋಷಕರು, ಗುರು-ಹಿರಿಯರನ್ನು ಗೌರವದಿಂದ ಕಾಣುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಮೈ ಕರೀಯರ್ ಲ್ಯಾಬ್ ಸ್ಥಾಪಕ ಶಂಕರ್ ಬೆಳ್ಳೂರು ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾರ್ಪೋರೇಟ್ ಕಂಪೆನಿಗಳು ತಮ್ಮ ಸಂಸ್ಥೆಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಮಾನದಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೆಚ್ಚು ಅಂಕ ಗಳಿಸಿದವರ ಬದಲಿಗೆ ಕೌಶಲ್ಯ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಪ್ರತಿಭೆಗಳಿಗೆ ದೊಡ್ಡ ದೊಡ್ಡ ಸಂಸ್ಥೆಗಳು ಮಣೆ ಹಾಕುತ್ತವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಅಂಕ ಗಳಿಕೆಗಷ್ಟೇ ಸೀಮಿತಗೊಳಿಸಬಾರದು. ಬದಲಾಗಿದೆ, ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅವಕಾಶ ನೀಡಬೇಕು ಎಂದರು.

ಕಾಂಗ್ರೆಸ್ ಮುಖಂಡ, ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್ ಮಾತನಾಡಿದರು. ಅಧ್ಯಕ್ಷತೆಯನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ವಹಿಸಿದ್ದರು.

PREV