ಎರಡು ವರ್ಷದ ಹಿಂದೆ ಆರಂಭವಾಗಿರುವ ಕೊಡಗು ವಿವಿಗೆ ಅನುದಾನವಿಲ್ಲದೆ ಆರ್ಥಿಕ ಸಂಕಷ್ಟ

KannadaprabhaNewsNetwork |  
Published : Mar 20, 2025, 01:21 AM ISTUpdated : Mar 20, 2025, 07:58 AM IST
ಕೊಡಗು ವಿವಿ | Kannada Prabha

ಸಾರಾಂಶ

ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಎರಡು ವರ್ಷದ ಹಿಂದೆ ಆರಂಭವಾಗಿರುವ ಕೊಡಗು ವಿಶ್ವವಿದ್ಯಾಲಯಕ್ಕೆ ಈವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಇರುವ ಆಂತರಿಕ ಆದಾಯದ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಡಗು ವಿವಿ ಆರ್ಥಿಕ ಸಂಕಷ್ಟದಲ್ಲೇ ಮುನ್ನಡೆಯುತ್ತಿದೆ.

ವಿಘ್ನೇಶ್ ಎಂ. ಭೂತನಕಾಡು

  ಮಡಿಕೇರಿ : ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಎರಡು ವರ್ಷದ ಹಿಂದೆ ಆರಂಭವಾಗಿರುವ ಕೊಡಗು ವಿಶ್ವವಿದ್ಯಾಲಯಕ್ಕೆ ಈವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಇರುವ ಆಂತರಿಕ ಆದಾಯದ ಸಂಪನ್ಮೂಲಗಳನ್ನು ಬಳಸಿಕೊಂಡು ಕೊಡಗು ವಿವಿ ಆರ್ಥಿಕ ಸಂಕಷ್ಟದಲ್ಲೇ ಮುನ್ನಡೆಯುತ್ತಿದೆ.

ಸರ್ಕಾರ ಮುಚ್ಚುವ ಆಲೋಚನೆಯಲ್ಲಿರುವ ಒಂಬತ್ತು ವಿವಿಗಳಲ್ಲಿ ಇದೂ ಒಂದಾಗಿದ್ದು, ಇದಕ್ಕೆ ಸ್ಥಳೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೆ, ವಿದ್ಯಾರ್ಥಿಗಳ ಕೊರತೆಯಿಂದ ಅನೇಕ ಕೋರ್ಸುಗಳು ಮುಚ್ಚಿ ಹೋಗುತ್ತಿರುವುದರಿಂದ ವಿವಿಧ ಕಾಯಂ ಹಾಗೂ ಅತಿಥಿ ಉಪನ್ಯಾಸಕರು ವಿಲೀನದ ಪರ ನಿಲುವು ತಳೆದಿದ್ದಾರೆ.

ಆರಂಭದ ದಿನದಲ್ಲಿ ಅಪಾರ ಸಮಸ್ಯೆಗಳನ್ನು ಕೊಡಗು ವಿವಿ ಎದುರಿಸಿತ್ತು. ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗದೆ ಮಂಗಳೂರು ವಿವಿ ಉಪನ್ಯಾಸಕರುಗಳನ್ನೇ ಬಳಕೆ ಮಾಡಿತ್ತು. ಈಗ ವಿದ್ಯಾರ್ಥಿಗಳ ದಾಖಲಾತಿ ಅನುಮೋದನಾ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಸಂಯೋಜನಾ ಶುಲ್ಕ ವಿವಿಯ ಆದಾಯ ಮೂಲಗಳಾಗಿದ್ದು, ಇದರಿಂದ ಬರುವ ಆದಾಯದಲ್ಲಿ ವಿವಿಯ ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ.

ಅಂದಿನ ಬಿಜೆಪಿ ಸರ್ಕಾರ ವಿವಿಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ನಂತರ ಬಂದ ಕಾಂಗ್ರೆಸ್ ಸರ್ಕಾರ ಕೂಡ ಅನುದಾನ ನೀಡಿಲ್ಲ. ಆಂತರಿಕ ಸಂಪನ್ಮೂಲವನ್ನು ಬಳಸಿಕೊಂಡು ವಿವಿ ಮುನ್ನಡೆಯಬೇಕಿದೆ. ಇದರಿಂದ ಕೊಡಗು ವಿವಿ ವ್ಯಾಪ್ತಿಯ ಕೆಲವು ಕಾಲೇಜುಗಳಿಗೆ ಆಡಳಿತಕ್ಕೆ ಬೇಕಾದ ಖರ್ಚು ವೆಚ್ಚಗಳಿಗೂ ಹಣ ದೊರಕುತ್ತಿಲ್ಲ. ಕಾಲೇಜಿನ ವಿದ್ಯುತ್ ಬಿಲ್ ಕೂಡ ಕಟ್ಟಲೂ ಸಾಧ್ಯವಾಗುತ್ತಿಲ್ಲ.

ಈಗ ಇರುವ ಖಾಯಂ ಬೋಧಕರು ಮಂಗಳೂರು ವಿವಿ ವ್ಯಾಪ್ತಿಗೆ ಒಳಪಟ್ಟವರಾಗಿದ್ದು, ಅವರಿಗೆ ಮಂಗಳೂರು ವಿವಿ ವೇತನ ಪಾವತಿ ಮಾಡುತ್ತಿದೆ. ಕೊಡಗು ವಿವಿಗೆ ಮಂಗಳೂರು ವಿವಿಯಿಂದ 80 ಬೋಧಕ ಹಾಗೂ 108 ಬೋಧಕೇತರ ಸಿಬ್ಬಂದಿ ವರ್ಗಾವಣೆಯಾಗಿದ್ದಾರೆ. ಕೊಡಗು ವಿವಿಯಲ್ಲಿ ಖಾಯಂ ಬೋಧಕರಿಲ್ಲ. ವಿವಿ ವ್ಯಾಪ್ತಿಯಲ್ಲಿ ಒಟ್ಟು 42 ಮಂದಿ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತಿಂಗಳ ಮೊದಲ ವಾರದಲ್ಲಿ ವೇತನ ಪಾವತಿಯಾಗುತ್ತಿದೆ ಎಂಬುದು ಮಾತ್ರ ಖುಷಿಯ ವಿಚಾರ.

ಕೊಡಗು ವಿವಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮನ್ನಣೆ ನೀಡಿದ್ದು, ವಿದ್ಯಾಲಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಅವಕಾಶ ಕಲ್ಪಿಸಿದೆ. ಕೊಡಗು ವಿವಿ, ಅಮೆರಿಕದ ಬ್ರಿಡ್ ವಾಟರ್ ಸ್ಟೇಟ್ ಯೂನಿವರ್ಸಿಟಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಆರ್ಥಿಕ ಸಮಸ್ಯೆ ಇದ್ದರೂ ಕೂಡ ಪರೀಕ್ಷಾ ಫಲಿತಾಂಶವನ್ನು ಬೇಗ ಪ್ರಕಟಿಸುವ ಮೂಲಕ ಇತರ ವಿವಿಗಳಿಗೆ ಮಾದರಿಯಾಗಿದೆ.

ಕೊಡಗು ವಿವಿ ವ್ಯಾಪ್ತಿಯಲ್ಲಿ ಒಟ್ಟು 25 ಕಾಲೇಜುಗಳಿವೆ. ಘಟಕ ಮಹಾವಿದ್ಯಾಲಯ 1 ಹಾಗೂ 1 ಸ್ನಾತಕೋತ್ತರ ಕೇಂದ್ರವಿದೆ. ಪ್ರಥಮ ಹಾಗೂ ದ್ವಿತೀಯ ಸ್ನಾತಕ ಪದವಿಯಲ್ಲಿ 3,973 ಮಂದಿ ಹಾಗೂ ಸ್ನಾತಕೋತ್ತರದಲ್ಲಿ 390 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 1,829 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, 2,534 ಹಿಂದುಳಿದ ವರ್ಗ ಹಾಗೂ ಇತರ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಇನ್ನು, ವಿವಿಯಲ್ಲಿರುವ ವಿಜ್ಞಾನ ಪ್ರಯೋಗಾಲಯಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಲಾಗಿಲ್ಲ. ಕಂಪ್ಯೂಟರ್ ರಿಪೇರಿ, ಮಕ್ಕಳಿಗೆ ಕ್ರೀಡಾ ಚಟುವಟಿಕೆಗೆ ಕೂಡ ಯಾವುದೇ ಅನುದಾನ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಕಾಲೇಜುಗಳಲ್ಲಿನ ಗ್ರಂಥಾಲಯಗಳಲ್ಲಿ ದಿನಪತ್ರಿಕೆಗಳನ್ನು ಕೂಡ ಇಳಿಕೆ ಮಾಡಲಾಗಿದೆ. ಗ್ರಂಥಾಲಯದಲ್ಲಿ ಪುಸ್ತಕ ಕೂಡ ಖರೀದಿಸಲಾಗಿಲ್ಲ. ವಿಶ್ವವಿದ್ಯಾಲಯ ವ್ಯಾಪ್ತಿಯ ಮಡಿಕೇರಿಯ ಕಾಲೇಜಿನಲ್ಲಿ ಹಾಸ್ಟೆಲ್ ಕೂಡ ಸ್ಥಗಿತಗೊಂಡಿದೆ.

ವಿದ್ಯಾಲಯ ವ್ಯವಸ್ಥಿತವಾಗಿ ನಡೆಯಬೇಕಾದರೆ ಪ್ರಸಾರಾಂಗ, ಬೋಧನಾಂಗ ಹಾಗೂ ಸಂಶೋಧನಾಂಗ ಮಹತ್ವದ್ದಾಗಿದೆ. ಆದರೆ, ಇದು ಹೊಸ ವಿವಿಯಲ್ಲಿ ಇಲ್ಲ ಎಂಬುದು ಪ್ರಮುಖರ ಆರೋಪ.

ಕೆಲವು ಕೋರ್ಸ್ ಗಳು ಬಂದ್:

ಮಕ್ಕಳ ಕೊರತೆಯಿಂದಾಗಿ ಕೊಡಗು ವಿವಿಯಲ್ಲಿ ಕೆಲವು ಸ್ನಾತಕೋತ್ತರ ಕೋರ್ಸ್‌ಗಳನ್ನು ಬಂದ್ ಮಾಡಲಾಗಿದೆ. ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. (ಇಂಗ್ಲಿಷ್), ಎಂಎಸ್ಸಿ ಭೌತಶಾಸ್ತ್ರ, ಎಂಬಿಎ ಟ್ರಾವೆಲ್ ಆ್ಯಂಡ್ ಟೂರಿಸಂ, ಕೊಡವ ಎಂಎ, ಪತ್ರಿಕೋದ್ಯಮ, ಬಿಎಚ್‌ಆರ್‌ಡಿ, ಬಿಎಸ್‌ಡಬ್ಲ್ಯೂ ಹಾಗೂ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಇತಿಹಾಸ ಹಾಗೂ ಸಸ್ಯಶಾಸ್ತ್ರ ಸ್ನಾತಕೋತ್ತರ ಕೋರ್ಸ್ ಗಳು ಬಂದ್ ಆಗಿವೆ.

ವಿವಿ ಬಂದ್ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೊಡಗು ವಿವಿಯಲ್ಲಿ ಕೂಲಿ ಕಾರ್ಮಿಕರು, ಬುಡಕಟ್ಟು ಹಾಗೂ ಹಿಂದುಳಿದ ವರ್ಗದ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಕೊಡಗಿಗೆ ಸಿಕ್ಕಿರುವ ಪ್ರತ್ಯೇಕ ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಕೊಡಗು ವಿವಿ ಹಿತರಕ್ಷಣಾ ಬಳಗದ ಮೂಲಕ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ವಿಲೀನ ಮಾಡಿ ಎನ್ನುವ ಖಾಯಂ ಬೋಧಕರು:

ಕೊಡಗಿಗೆ ಸಿಕ್ಕಿರುವ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂಬ ಬಹುದೊಡ್ಡ ಒತ್ತಾಯ ಜಿಲ್ಲೆಯಲ್ಲಿದೆ. ಮತ್ತೊಂದು ಕಡೆ ಇದೀಗ ಕರ್ತವ್ಯ ನಿರ್ವಹಿಸಿರುವ ಖಾಯಂ ಬೋಧಕರು ಹಾಗೂ ಕೆಲವು ಅತಿಥಿ ಉಪನ್ಯಾಸಕರು ಮತ್ತೆ ಮಂಗಳೂರು ವಿವಿಯೊಂದಿಗೆ ಕೊಡಗು ವಿವಿಯನ್ನು ವಿಲೀನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ತಮ್ಮನ್ನು ಹೊಸ ವಿವಿಗೆ ಒಳಪಡಿಸಿದರೆ ಸರ್ಕಾರದ ಆದೇಶದಂತೆ ಹಳೆ ಪಿಂಚಣಿ ಹಾಗೂ ಸೇವಾ ಸೌಲಭ್ಯ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ ಖಾಯಂ ಬೋಧಕರು ಮಂಗಳೂರಿಗೆ ಮತ್ತೆ ಕೊಡಗು ವಿವಿಯನ್ನು ಸೇರಿಸಿ ಎಂದು ಬೇಡಿಕೆ ಇಡುತ್ತಿದ್ದಾರೆ. ಇಲ್ಲದಿದ್ದರೆ ಮಂಗಳೂರಿಗೆ ವರ್ಗಾವಣೆಯಾಗಲು ಬಯಸಿದ್ದಾರೆ.

ವಿವಿ ವ್ಯಾಪ್ತಿಗೆ 100 ಎಕರೆ ಜಾಗ

ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯಕ್ಕೆ ಸುಮಾರು 100 ಎಕರೆ ಜಮೀನಿದೆ. 70 ಎಕರೆ ಈಗಾಗಲೇ ಕೊಡಗು ವಿವಿಗೆ ವರ್ಗಾವಣೆಯಾಗಿದ್ದು, ಉಳಿದ ಜಮೀನು ವರ್ಗಾವಣೆ ಪ್ರಕ್ರಿಯೆಯಲ್ಲಿದೆ. 15,739 ಚ.ಮೀ. ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕೂಡ ಹೊಂದಿದೆ.

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಹೊಸ ವಿವಿ ಕಳೆದ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಯುಜಿಸಿಯಿಂದ ಮಾನ್ಯತೆ ಕೂಡ ಪಡೆದಿದೆ. ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯಗಳಿವೆ. ಹಲವು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಖಾಯಂ ಸಿಬ್ಬಂದಿಗಳ ವರ್ಗಾವಣೆಗೆ ಸರ್ಕಾರದಿಂದ ಅನುಮತಿ ದೊರಕಬೇಕು. ಜಿಲ್ಲೆಯ ಮಕ್ಕಳ ಹಿತದೃಷ್ಟಿಯಿಂದ ವಿಶೇಷ ಎಂದು ಪರಿಗಣಿಸಿ ವಿವಿ ಮುನ್ನಡೆಸಲು ಅವಕಾಶ ನೀಡಬೇಕು.

- ಪ್ರೊ.ಅಶೋಕ ಸಂಗಪ್ಪ ಆಲೂರ, ಕುಲಪತಿಗಳು ಕೊಡಗು ವಿಶ್ವವಿದ್ಯಾಲಯ.---

ಕೊಡಗು ವಿವಿ ಮುಚ್ಚುವ ಪ್ರಸ್ತಾಪ ಬಂದಿರುವುದು ಖಂಡನೀಯ. ಸರ್ಕಾರಕ್ಕೆ ವಿಶ್ವವಿದ್ಯಾಲಯ ನಡೆಸಲು ಶಕ್ತಿ ಇಲ್ಲದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ನೀಡಲಿ. ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ಹಣ ವಿನಿಯೋಗಿಸುವ ಸರ್ಕಾರಕ್ಕೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕನಿಷ್ಠ ಮೂರು ಕೋಟಿ ಹಣ ನೀಡಲು ಸಾಧ್ಯವಿಲ್ಲವೇ?. ಆಗಿಲ್ಲ ಎಂದರೆ ನಾವು ವಿವಿಧ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಫಂಡ್ ಮೂಲಕ ವಿಶ್ವವಿದ್ಯಾಲಯ ಮುನ್ನಡೆಸುತ್ತೇವೆ.

- ಅಪ್ಪಚ್ಚು ರಂಜನ್, ಮಾಜಿ ಸಚಿವ ಮಡಿಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ