ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವರಂತಹ ಆದಿಮ ಸಂಜಾತ ಅತೀಸೂಕ್ಷ್ಮ ಸಮುದಾಯಗಳ ಉಳಿವಿಗಾಗಿ ಸಂವಿಧಾನದಡಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶವಿದ್ದು, ಸ್ವಯಂ ನಿರ್ಣಯದ ಹಕ್ಕಿನ ಮೂಲಕ ಕೊಡವ ಲ್ಯಾಂಡ್ ಹೊಂದುವುದು ಕೊಡವರ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಇತರರ ಬಗ್ಗೆ ಎಂದಿಗೂ ಕಾಳಜಿ ಇಲ್ಲದ ಜನರು ಊಳಿಗಮಾನ್ಯ ಮನೋಭಾವದಿಂದ ರಾಜ್ಯವನ್ನು ಆಳುತ್ತಿದ್ದಾರೆ. ಅವರು ರಾಜ್ಯದ ಕನಿಷ್ಠ 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಮತ್ತು ತಮ್ಮ 60 ವಿಧಾನಸಭಾ ಕ್ಷೇತ್ರಗಳ ಭಾಗವಾಗಿರುವ ಇತರ ಸೂಕ್ಷ್ಮ ಸಮುದಾಯಗಳ ಯೋಗಕ್ಷೇಮದ ಬಗ್ಗೆ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.ಇತರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಮಂದಿ ತಮ್ಮ ಸಮುದಾಯಕ್ಕೆ ಎಷ್ಟು ಸೀಟು ಬೇಕೆನ್ನುವ ಲೆಕ್ಕಾಚಾರದಲ್ಲಿ ಚುನಾವಣೆಗಳ ಸಂದರ್ಭ ಮತಾಂಧತೆಯ ಅಶ್ಲೀಲತೆ ಅನಾವಣಗೊಳಿಸುತ್ತಾರೆ. ತಮ್ಮ ಈ ನಡೆ ಜಾತ್ಯತೀತತೆಯ ಮತ್ತು ಅಂತರ್ಗತ ರುಜುವಾತುಗಳಿಗೆ ಅನುಗುಣವಾಗಿದೆ ಎಂದು ಹೇಳಿಕೊಂಡೆ ಮತಾಂಧತೆಯ ವಿಕೃತಿ ಮೆರೆಯುತ್ತಾರೆ ಎಂದು ಆರೋಪಿಸಿದ್ದಾರೆ.
ಕೊಡವರಂತಹ ಆದಿಮ ಸಂಜಾತ ನಗಣ್ಯ ಅತೀಸೂಕ್ಷ್ಮ ಸಮುದಾಯಗಳು ತಮ್ಮ ಉಳಿವಿಗಾಗಿ ಸಂವಿಧಾನದಡಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಿದರೆ, ಈ ಕೋಮುವಾದಿಗಳು ಮೊಸಳೆ ಕಣ್ಣೀರು ಸುರಿಸುತ್ತಾ, ಕೊಡವರ ಹಕ್ಕುಗಳು ಇತರ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ಅರ್ಥಹೀನವಾಗಿ ವರ್ತಿಸುತ್ತಿದ್ದಾರೆ. ತಾವು ಬಹುದೊಡ್ಡ ಮಾನವತಾವಾದದ ಹರಿಕಾರರು ಮತ್ತು ಸಾಮಾಜಿಕ ಸಮತಾವಾದದ ವೀರಾಗ್ರೇಸರೆಂದು ಹುಸಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.ಕೊಡವರು ಧೈರ್ಯವಾಗಿರಬೇಕು, ಕೊಡವ ನೆಲ ನಮ್ಮ ಸಾಂಪ್ರದಾಯಿಕ ಮತ್ತು ಪ್ರಾಚೀನ ಅವಿಭಾಜ್ಯ ತಾಯ್ನಾಡಾಗಿದೆ. ಇದನ್ನು ಪುನರುಜ್ಜೀವನಗೊಳಿಸೋಣ ಮತ್ತು ರಕ್ಷಿಸೋಣ. ಇದು ನಮ್ಮ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕು, ನಮ್ಮ ಹಕ್ಕಿನ ಬಗ್ಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ನಮ್ಮ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕು ಕೊಡವ ಲ್ಯಾಂಡ್ ಆಗಿದ್ದು, ಇದನ್ನು ವಿಶ್ವರಾಷ್ಟ್ರ ಸಂಸ್ಥೆ ಚಾರ್ಟರ್/ಸನದ್ ಮತ್ತು ನಮ್ಮ ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸುತ್ತದೆ. ಆ ಮೂಲಕ ನಮ್ಮ ಭವಿಷ್ಯ ಮತ್ತು ಸ್ವಯಂ ನಿರ್ಣಯದ ಹಕ್ಕುಗಳನ್ನು ನಿರ್ಧರಿಸಿಕೊಳ್ಳೋಣ. ಇರ‍್ಯಾರಿಂದಲೂ ಕೊಡವರನ್ನು ಬೆದರಿಸಲು ಅಥವಾ ಆಮಿಷದಿಂದ ಮಣಿಸಲು ಸಾಧ್ಯವಿಲ್ಲ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.