ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಒಂದು ಕಾಲದಲ್ಲಿ ಕೊಡಗು ಸಾಹಿತ್ಯ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ ಎಂಬ ಅಪಕೀರ್ತಿಗೆ ಒಳಗಾಗಿತ್ತು ಎಂಬ ಮಾತು ಹಿರಿಯರ ಬಾಯಿಂದ ಕೇಳಿದ್ದೇವೆ. ಇದನ್ನೊಂದು ಸವಾಲಾಗಿ ಸ್ವೀಕರಿಸಿ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ 2013ರಲ್ಲಿ ಸಮಾನ ಮನಸ್ಕ ಯುವಕ, ಯುವತಿಯರು ಸೇರಿ ಕೊಡವ ಮಕ್ಕಡ ಕೂಟ ಎಂಬ ಸಂಘಟನೆಯನ್ನು ರಚಿಸಲಾಯಿತು. ನಂತರ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಯಿತು ಎಂದು ತಿಳಿಸಿದರು.
ಬಾಳೆಯಡ ಕಿಶನ್ ಪೂವಯ್ಯ ಅವರು ಕೇವಲ ವಕೀಲಿ ವೃತ್ತಿಯಲ್ಲಿ ಮಾತ್ರ ಪರಿಣಿತರಲ್ಲ, ತಮ್ಮ ಮೊನಚಾದ ಬರಹಗಳ ಮೂಲಕ ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಪ್ರಸ್ತುತದ ಪರಿಸ್ಥಿತಿಯನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ಮುಂದಿನ ಭವಿಷ್ಯದ ಯುವ ಪೀಳಿಗೆಯ ಮೇಲೆ ಬೀರುವ ದುಷ್ಪರಿಣಾಮ, ಕೊಡಗಿನ ಆಸ್ತಿಯೇ ಆಗಿರುವ ಪ್ರಕೃತಿಯ ವಿನಾಶ ಸೇರಿದಂತೆ ಹಲವು ವಿಚಾರಗಳನ್ನು ಪುಸ್ತಕದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದರು.ಕಿಶನ್ ಪೂವಯ್ಯ ಅವರು ತಂದೆ ಬಾಳೆಯಡ ಚರ್ಮಣ್ಣ, ಶ್ರೀ ರಾಜರಾಜೇಶ್ವರಿ ದೇವಾಲಯ ಸಮಿತಿಯ ಟ್ರಸ್ಟಿ ದೇವರಾಜು (ಮಣಿ), ಪ್ರಮುಖರಾದ ಪಕ್ತಿ, ಸತೀಶ್, ಕಿರಣ್ ಕುಮಾರ್, ಪ್ರಧಾನ ಅರ್ಚಕ ಶ್ರೀನಿವಾಸ್ ಸ್ವಾಮಿ, ರಾಜರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ದಾಕ್ಷಾಯಿಣಿ ವಾಸುದೇವ್, ಭಕ್ತರಾದ ಸೂದನ ಹರೀಶ್, ಮೊಟ್ಟೇರ ಹೇಮಾವತಿ, ನೆರವಂಡ ಉಷಾ ಮತ್ತಿತರರು ಉಪಸ್ಥಿತರಿದ್ದರು.