ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಕೊಡವರ ಸಂವಿಧಾನಿಕ ಹಕ್ಕಾಗಿದೆ : ವಿಕ್ರಮ್ ಹೆಗ್ಡೆ ಅಭಿಮತ

KannadaprabhaNewsNetwork |  
Published : Jun 18, 2025, 11:48 PM IST
ಚಿತ್ರ : 18ಎಂಡಿಕೆ2 : ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಮಾತನಾಡಿದರು.  | Kannada Prabha

ಸಾರಾಂಶ

ಕೊಡವ ಲ್ಯಾಂಡ್‌ ಭೂ ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು ಕೊಡವರ ಸಾಂವಿಧಾನಿಕ ಹಕ್ಕಾಗಿದೆ. ಸಂಘನೆಯ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿಕ್ರಮ್‌ ಹೆಗ್ಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯನ್ನು ಪಡೆಯುವುದು ಕೊಡವರ ಸಾಂವಿಧಾನಿಕ ಹಕ್ಕಾಗಿದ್ದು, ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಹೋರಾಟಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಸುಪ್ರೀಂಕೋರ್ಟ್ ವಕೀಲ ವಿಕ್ರಮ್ ಹೆಗ್ಡೆ ಕರೆ ನೀಡಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿಯ ಹೊರವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರ ಹಕ್ಕುಗಳ ಕುರಿತು ವಿಚಾರ ಮಂಡಿಸಿದರು.1834ರಲ್ಲಿ ಕೊಡಗು ಎಂಬ ಸ್ವತಂತ್ರ ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡು, 1874ರ ಶೆಡ್ಯೂಲ್ಡ್ ಡಿಸ್ಟ್ರಿಕ್ಟ್ ಕಾಯ್ದೆಯಡಿ ತರಲಾಯಿತು. ಬಳಿಕ 1919ರ ಭಾರತ ಸರ್ಕಾರ ಕಾಯ್ದೆಯಡಿಯಲ್ಲಿ ಕೊಡಗನ್ನು ಚೀಫ್ ಕಮಿಷನರ್ ಪ್ರಾಂತ್ಯವನ್ನಾಗಿ ಮಾಡಲಾಯಿತು. 1923ರಲ್ಲಿ ಕೊಡಗು ತನ್ನದೇ ಆದ ಶಾಸನ ಮಂಡಳಿಯನ್ನು ಪಡೆಯಿತು. ಆದರೆ 1956ರಲ್ಲಿ ರಾಜ್ಯ ಪುನರ್ ರಚನೆಯ ಕಾಯ್ದೆಯಡಿ ಕೊಡಗನ್ನು ಮೈಸೂರಿನೊಂದಿಗೆ ವಿಲೀನಗೊಳಿಸಿದ ನಂತರ ಕೊಡವ ಸಮುದಾಯದ ಅನನ್ಯ ಬೇಡಿಕೆಗಳಿಗೆ ಅಗತ್ಯ ಸ್ಪಂದನ ದೊರೆಯಲಿಲ್ಲ ಎಂದು ವಿಕ್ರಮ್ ಹೆಗ್ಡೆ ಗಮನ ಸೆಳೆದರು.

ಕೊಡವ ಸಂಸ್ಕೃತಿ ಅತ್ಯಂತ ವಿಭಿನ್ನ: ಕೊಡವ ಸಂಸ್ಕೃತಿ ಅತ್ಯಂತ ವಿಭಿನ್ನವಾಗಿದೆ, ಕೊಡವರು ಅನನ್ಯ ಆ್ಯನಿಮಿಸ್ಟಿಕ್ ಧಾರ್ಮಿಕ ಪಂಥದವರು. ಅವರ ದೇವತೆಗಳು, ಪೂಜಾ ವಿಧಾನಗಳು, ಪೂರ್ವಜ ಪೂಜೆ (ಗುರು ಕಾರಣ), ಪ್ರಕೃತಿ ಆರಾಧನೆ (ದೇವರಕಾಡು) ಭೂದೇವಿ, ಜಲದೇವಿ, ಸ್ವರ್ಗೀಯ ಆತ್ಮಗಳ ಆರಾಧನೆ ಇವುಗಳು ಪ್ರತ್ಯೇಕ ಮತ್ತು ವಿಶಿಷ್ಟವಾದವು. ಕೊಡಗಿಗೆ ಮಾತ್ರ ಸೀಮಿತವಾದ ಕೊಡವರ ವಿಶಿಷ್ಟ ಹಬ್ಬಗಳಿವೆ.ಕೊಡವ ಭಾಷೆ ಕೇವಲ ಒಂದು ಭಾಷೆ ಮಾತ್ರವಲ್ಲ. ಅದು ಕೊಡವರ ಆತ್ಮಸ್ಫೂರ್ತಿ, ಇದಕ್ಕೆ ಯುಗ ಯುಗಗಳ ದೀರ್ಘ ಹಿನ್ನೆಲೆ ಇದೆ. ಲಕ್ಷದ್ವೀಪದಲ್ಲಿ 64,000 ಜನರಿಗೆ ಪ್ರತ್ಯೇಕ ಸೀಟು ಇದೆ. ಕೊಡಗಿಗೂ ಪ್ರಾದೇಶಿಕ ಲೋಕಸಭಾ ಕ್ಷೇತ್ರಕ್ಕಿಂತ ಕೊಡವರಿಗಾಗಿಯೇ ಒಂದು ಮತಕ್ಷೇತ್ರ ಬೇಕಾಗಿದೆ. ಮಣಿಪುರ ಮತ್ತು ಸಿಕ್ಕಿಂನ ಮಾದರಿ ಕೊಡವರಿಗೆ ವಿಶಿಷ್ಟ ಪ್ರತಿನಿಧಿ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಈ ದೇಶದ ಭೂ ರಾಜಕೀಯ ವ್ಯವಸ್ಥೆ ಐದು ಶ್ರೇಣಿಯ ಕ್ರಮಾನುಗತ ವಿಧಾನದಲ್ಲಿ ಚಾಚಿಕೊಂಡಿದೆ. ಕೊಡವರ ಜನಾಂಗೀಯ ಹೆಗ್ಗುರುತಿನ ರಕ್ಷಣೆಯೊಂದಿಗೆ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ವರ್ಗಿಕರಿಸುವುದರೊಂದಿಗೆ "ಸೋಶಿಯಲ್ ಇಂಜಿನಿಯರಿಂಗ್ "ಮೂಲಕ ಸಬಲೀಕರಣಗೊಳ್ಳುವ ಹಂಬಲ ಒಂದೆಡೆಯಾದರೆ ಕೊಡವರ ರಾಜಕೀಯ ಅಶೋತ್ತರಗಳನ್ನು ಈಡೇರಿಸಲು ವಿಶೇಷ ಪೊಲಿಟಿಕಲ್ ಡಿಸೈನ್‌ಗಾಗಿ ಸಿಎನ್‌ಸಿ ಆಹೋರಾತ್ರಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಇದಕೋಸ್ಕರ ರಾಜಕೀಯಾತ್ಮಕ, ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ನಡಿಗೆಯ ಮೂಲಕ ತಾರ್ಕಿಕ ಗುರಿ ಸಾಧನೆಯತ್ತ ನಡೆಯುತ್ತಿದೆ ಎಂದು ವಿಶ್ಲೇಷಿಸಿದರು.

ಬೆಂಬಲ ನೀಡಬೇಕು: ಕರ್ನಾಟಕ ಹೈ ಕೋರ್ಟ್ನ ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿ, ಕೊಡವರ ಸಂವಿಧಾನಿಕ ಹಕ್ಕುಗಳಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆಗೆ ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ಕರೆ ನೀಡಿದರು. ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಸಿಎನ್‌ಸಿ ಕೊಡವರ ಸಾಕ್ಷಿ ಪ್ರಜ್ಞೆಯಾಗಿ ಕಳೆದ 35 ವರ್ಷಗಳಿಂದ ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದೆ. ಈ ರೀತಿಯ ಉತ್ಸಾಹದ ಚಿಲುಮೆಯಾಗಿ ಹೋರಾಟವನ್ನ ಇಲ್ಲಿಯವರೆಗೆ ತಲುಪಿಸಿದ ಎನ್.ಯು.ನಾಚಪ್ಪ ಅವರು ನಮ್ಮೆಲ್ಲರ ಕಣ್ಮಣಿಯಾಗಿದ್ದಾರೆ. ಪ್ರತಿಯೊಬ್ಬ ಮಗುವು ತನ್ನ ಭವಿಷ್ಯತ್ತಿನ ಬೆಳಕಾಗಿರುವ ಸಿಎನ್‌ಸಿಯೊಂದಿಗೆ ಗುರುತಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಬಾಳೆದಿಂಡು ಕಡಿಯುವ ಗೌರವದ ಮೂಲಕ ವಿಕ್ರಮ್ ಹೆಗ್ಡೆ ಅವರನ್ನು ಸಭೆಗೆ ಕರೆ ತರಲಾಯಿತು. ಮೂರು ಗುಂಡುಗಳನ್ನು ಬಾನೆತ್ತರಕ್ಕೆ ಹಾರಿಸಿ ಬಂದೂಕು ಹಕ್ಕಿನ ವ್ಯಾಜ್ಯ ನಡೆಸುತ್ತಿರುವ ವಿಕ್ರಮ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಹಕ್ಕೊತ್ತಾಯ ಮಂಡನೆ : ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಬೇಕು. ಅಂತಾರಾಷ್ಟ್ರೀಯ ಸಂಪ್ರದಾಯಗಳ ಅಡಿಯಲ್ಲಿ ಆನಿಮಿಸ್ಟಿಕ್ ಏಕ-ಜನಾಂಗೀಯ ಕೊಡವರ ಮಾನ್ಯತೆ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯ ಮಂಡಿಸಲಾಯಿತು.

ಕಲಿಯಂಡ ಪ್ರಕಾಶ್ ಸ್ವಾಗತಿಸಿದರು. ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು. ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ಸೂರ್ಯ-ಚಂದ್ರ, ಗುರು-ಕಾರೋಣ, ಜಲದೇವತೆ ಕಾವೇರಿ, ಪರ್ವತ ದೇವಿ, ವನ ದೇವಿ, ಭೂ ದೇವಿ ಮತ್ತು ಭಾರದ ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅಂತಿಮವಾಗಿ ರಾಷ್ಟ್ರ ಗೀತೆ ಜನ- ಗಣ- ಮನ ಪಠಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ವಕೀಲ ವಿಕ್ರಮ್ ಹೆಗ್ಡೆ ಹಾಗೂ ಅವರ ಪತ್ನಿ ಪ್ರಖ್ಯಾತ ಕಾನೂನು ತಜ್ಞೆ, ವಕೀಲೆ ಹಿಮಾ ಲಾರೆನ್ಸ್ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಗಮನ ಸೆಳೆದರು.ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ನಂದೇಟಿರ ಕವಿತಾ, ನಂದಿನೆರವಂಡ ರೇಖಾ ನಾಚಪ್ಪ, ಅಪ್ಪಚ್ಚಿರ ರೀನಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಬಿದ್ದಂಡ ರಾಧ, ಐಚಂಡ ರಶ್ಮಿ, ಅಜ್ಜಿನಿಕಂಡ ಇನಿತಾ, ನಡಿಕೇರಿಯಂಡ ಉಷಾ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ