ಉಡುಪಿ: ಇಲ್ಲಿನ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾ ರುದ್ರಯಾಗದ ಪ್ರಯುಕ್ತ ಗುರುವಾರ ಅದ್ದೂರಿ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ನಂತರ ವೈವಿಧ್ಯಮಯ ಸ್ಥಬ್ದಚಿತ್ರಗಳು, ವಾದ್ಯಘೋಷಗಳು, ಭಜನಾ ತಂಡಗಳು ಮತ್ತು ಸಾವಿರಾರು ಮಂದಿ ಭಕ್ತಾಭಿಮಾನಿಗಳ ಭವ್ಯ ಮೆರವಣಿಗೆಯು ಮಲ್ಪೆ ಅಯ್ಯಪ್ಪ ಮಂದಿರದಿಂದ ಹೊರಟು ಕೊಡವೂರು ಸರ್ಕಲ್ ಮೂಲಕ ಶಂಕರನಾರಾಯಣ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.ಮಹಾ ರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಪ್ರಧಾನ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ತಾರಾನಾಥ ಪೂಜಾರಿ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ದೇವಳದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್ ಮತ್ತು ಭುವನೇಂದ್ರ ಕಿದಿಯೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಯಾಗ ಸಮಿತಿ ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು, ರಮೇಶ್ ತಿಂಗಳಾಯ, ಡಾ. ವಿಜಯೇಂದ್ರ, ಪದಾಧಿಕಾರಿಗಳಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ, ಕಿಶನ್ ಹೆಗ್ಡೆ ಕೊಳ್ಕೆಬೈಲು. ವಿಜಯ ಕೊಡವೂರು, ಕುಶಲ್ ಶೆಟ್ಟಿ ಇಂದ್ರಾಳಿ. ಸುರೇಶ್ ಶೆಟ್ಟಿ ಬನ್ನಂಜೆ ಮತ್ತಿತರರಿದ್ದರು.
100ಕ್ಕೂ ಅಧಿಕ ವಾಹನಗಳಲ್ಲಿ ತೆಂಗಿನಕಾಯಿ, ಹಲಸಿನಕಾಯಿ, ಬೆಲ್ಲ, ದವಸ ಧಾನ್ಯಗಳು, ಅಕ್ಕಿ, ಕಲ್ಲಂಗಡಿ ಹಾಗೂ ವಿವಿಧ ಸಾಮಗ್ರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಲಾಯಿತು.ಇಂದು ಯಾಗ ಆರಂಭ: ಶುಕ್ರವಾರ, ಮಹಾರುದ್ರ ಯಾಗದ ಅಂಗವಾಗಿ ಗಣಯಾಗ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ. ಸಂಜೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.16ರಂದು ಉಚಿತ ಆರೋಗ್ಯ ಶಿಬಿರ, 17ರಂದು ಮಲ್ಪೆ ಬೀಚಿನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳು ನಡೆಯಲಿದ್ದು, ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ರಾತ್ರಿ 8ಕ್ಕೆ ದಕ್ಷಿಣ ಭಾರತದ ಪ್ರಸಿದ್ದ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 18ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.