ಶಾಲಾ ಕಾಲೇಜುಗಳಲ್ಲಿ ಮತ್ತೆ ಹಿಜಾಬ್ ಧರಿಸಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿರುವುದನ್ನು ಉಡುಪಿ ಚಿಕ್ಕಮಗಳೂರು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪಿಸಿದ್ದಾರೆ.
ಉಡುಪಿ: ಶಾಲಾ ಕಾಲೇಜುಗಳಲ್ಲಿ ಮತ್ತೆ ಹಿಜಾಬ್ ಧರಿಸಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿರುವುದನ್ನು ಉಡುಪಿ ಚಿಕ್ಕಮಗಳೂರು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ಷೇಪಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಮತ್ತೆ ಹಿಜಾಬ್‌ಗೆ ಅವಕಾಶ ನೀಡಿ, ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಒಂದು ಆದೇಶ ನೀಡಿದೆ. ಯಾವುದೇ ಧಾರ್ಮಿಕ ದಿರಿಸು ಹಾಕಲು ಅವಕಾಶ ಇಲ್ಲ ಎಂದು ಹೇಳಿದೆ. ಸಮಾನವಸ್ತ್ರಕ್ಕೆ ಮಾತ್ರ ಅವಕಾಶ ಎಂದು ಹೇಳಿದೆ. ಹೈ ಕೋರ್ಟ್ ಆದೇಶ ವಿರೋಧಿಸಿ ನಂತರ ಸುಪ್ರೀಂಕೋರ್ಟಿಗೆ ಹೋಗಲಾಗಿದ್ದು, ಸುಪ್ರೀಂ ಕೋರ್ಟ್ ಹೈ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ, ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ಕೂಡ ನೀಡಿಲ್ಲ. ಹಾಗಾಗಿ ಹೈಕೋರ್ಟ್ ಆದೇಶ ಅನುಷ್ಠಾನದಲ್ಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೆನಪಿಸಿದ್ದಾರೆ.ಉಚ್ಚ ನ್ಯಾಯಾಲಯದ ಆದೇಶ ಇದ್ದರೂ ಕೂಡ ರಾಜ್ಯ ಸರ್ಕಾರ ಹೊಸ ಆದೇಶ ಮಾಡಿದೆ. ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ನ್ಯಾಯಾಲಯದ ಆದೇಶ ಮೀರಿ ರಾಜ್ಯ ಸರ್ಕಾರ ವರ್ತಿಸಿದೆ. ನ್ಯಾಯಾಲಯಕ್ಕೆ ಮನವರಿಕೆ ಮಾಡುದನ್ನು ಬಿಟ್ಟು ಆದೇಶ ಮಾಡಿದೆ. ಈ ಆದೇಶದ ಮಾನದಂಡ ಏನು ಶಿಕ್ಷಣ ಸಚಿವರೆ ಉತ್ತರಿಸಬೇಕು. ನೆಮ್ಮದಿಯಲ್ಲಿರುವ ಸಮಾಜದಲ್ಲಿ ಗೊಂದಲದ ವಾತಾವರಣ ನಿರ್ಮಿಸಿದ್ದಾರೆ. ಹಿಜಾಬ್ ಕೇಸರಿ ಶಾಲು ವಿವಾದ ಉಂಟಾದರೆ ಸರ್ಕಾರವೇ ಹೊಣೆ. ಸರ್ಕಾರದ ನಿಲುವು ಖಂಡನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆ ಫಲಿತಾಂಶದ ನಂತರ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಕಾನೂನು ಮೀರಿಸುತ್ತೋಲೆ ಮಾಡುವುದು ಬೇಜವಾಬ್ದಾರಿ ನಡವಳಿಕೆ. ಇದಕ್ಕೆ ಕಾನೂನು ಪಂಡಿತ ಸಿದ್ದರಾಮಯ್ಯ ಯಾಕೆ ಒಪ್ಪಿದರು ಗೊತ್ತಿಲ್ಲ. ಇವರದೇ ಸರ್ಕಾರ ಜನಿವಾರ ಕಟ್ ಮಾಡಿ ಆಗಿದೆ ಎಂದವರು ಟೀಕಿಸಿದ್ದಾರೆ.
ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸಮಾನ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಕಾಂಗ್ರೆಸ್ ಸರ್ಕಾರ ಈ ಆದೇಶವನ್ನು ವಾಪಸ್ ಪಡೆದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಹೌದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಉಪ ಚುನಾವಣೆ ಸಂದರ್ಭ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಕೊಟ್ಟ ಕಪಾಳ ಮೋಕ್ಷದ ನೋವನ್ನು ಮರೆಯುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಈಗ ಒಂದಾದ ಮೇಲ್ಲೊಂದರಂತೆ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ. ಕಳೆದ ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಈಗ ಹಿಜಾಬ್ ಗೆ ಅವಕಾಶ ನೀಡಲಾಗಿದೆ. ಅತಿಯಾದ ಓಲೈಕೆ ಮಾಡಿದಕ್ಕಾಗಿ ಪಶ್ಚಿಮಬಂಗಾಲ ಹಾಗೂ ಇತರೆ ರಾಜ್ಯಗಳಲ್ಲಿ ಕತೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.ಹಿಜಾಬ್ ನಿರ್ಬಂಧ ರದ್ದು: ಎಸ್‌ಡಿಪಿಐ ಸ್ವಾಗತ: ಹಿಜಾಬ್ ನಿಷೇಧವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು “ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ” ಎಂದು ಟೀಕಿಸಿರುವ ಶಾಸಕ ಯಶ್ ಪಾಲ್ ಸುವರ್ಣ ಅವರ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ ಖಂಡಿಸಿದ್ದಾರೆ.
ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ. ಹಿಜಾಬ್ ಎನ್ನುವುದು ಕೇವಲ ಉಡುಪು ಅಲ್ಲ. ಅದು ಮುಸ್ಲಿಂ ಮಹಿಳೆಯರ ಧಾರ್ಮಿಕ ನಂಬಿಕೆ, ವೈಯಕ್ತಿಕ ಗೌರವ ಹಾಗೂ ಸಂವಿಧಾನಬದ್ಧ ಹಕ್ಕಿನ ಪ್ರತೀಕವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.ಹಿಜಾಬ್ ಗೆ ಅವಕಾಶ ನೀಡಿದ್ದು ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ ಎಂದು ಶಾಸಕರು ಬಣ್ಣಿಸಿದ್ದು ಅತ್ಯಂತ ದುರುದ್ದೇಶಪೂರಿತ ಹಾಗೂ ಸಮಾಜದಲ್ಲಿ ದ್ವೇಷ ಬಿತ್ತುವ ಪ್ರಯತ್ನವಾಗಿದ್ದು, ಬಿಜೆಪಿಯ ನಾಯಕರಿಗೆ ಜನರ ನೈಜ ಸಮಸ್ಯೆಗಳಿಗಿಂತ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ರಾಜಕೀಯವೇ ಮುಖ್ಯವಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣ ವಿಫಲರಾದ ಉಡುಪಿಯ ಶಾಸಕರು ಇದೀಗ ಮತ್ತೆ ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಮುಂದೆಯೂ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಎಸ್‌ಡಿಪಿಐ ತನ್ನ ಹೋರಾಟವನ್ನು ಮತ್ತಷ್ಟು ಬಲವಾಗಿ ಮುಂದುವರಿಸಲಿದೆ ಎಂದು ಆಸಿಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.