ಕನ್ನಡಪ್ರಭ ವಾರ್ತೆ ಬೀಳಗಿ

ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಮೇಯಲು ಹೋಗಿದ್ದ 3 ಕುರಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದನ್ನು ಖಂಡಿಸಿ, ಬೀಳಗಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ರೈತರು ಹಾಗೂ ಕುರಿಗಾಯಿಗಳು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಒಲೆ ಹೂಡಿ ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ತಾಲೂಕಿನ ಸುನಗ ಗ್ರಾಮದ ಕುರಿಗಾಯಿ ಗದಿಗೇಪ್ಪ ಕಲಾದಗಿ ಅವರ 2 ಕುರಿಗಳು ಹಾಗೂ ಬೀಳಗಿ ಪಟ್ಟಣದ ಲಕ್ಷ್ಮಣ ಬಿದರಿ ಅವರ ಒಂದು ಕುರಿ ಸೇರಿ ಒಟ್ಟು 3 ಕುರಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರೆಂದು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ವಶಕ್ಕೆ ಪಡೆದಿರುವ ಕುರಿಗಳನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು. ಈ ಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಮುಖಂಡ ಸಿದ್ದಪ್ಪ ಬಳಗಾನೂರ ಮಾತನಾಡಿ, ಕಾಯ್ದಿರಿಸಿದ ಅರಣ್ಯ ಮತ್ತು ವನ್ಯಜೀವಿಧಾಮ ಪ್ರದೇಶದಲ್ಲಿ ಕುರಿಗಳು ಪ್ರವೇಶಿಸಿದರೆ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇಂತಹ ಭಾರೀ ದಂಡವನ್ನು ಕಟ್ಟಲು ಬಡ ಕುರಿಗಾಯಿಗಳಿಗೆ ಸಾಧ್ಯವೇ? ಅವರ ಬದುಕು ಹೇಗೆ ಸಾಗಬೇಕು? " ಎಂದು ಪ್ರಶ್ನಿಸಿದರು.2015ರಲ್ಲಿ ಬೀಳಗಿ ಅರಣ್ಯವನ್ನು ವನ್ಯಜೀವಿ ಧಾಮವೆಂದು ಘೋಷಿಸುವ ಮುನ್ನ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಆದರೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ನಮಗೆ ಈ ವನ್ಯಜೀವಿ ಧಾಮದ ಅಗತ್ಯವಿಲ್ಲ. ಅದನ್ನು ರದ್ದುಗೊಳಿಸಿ ರೈತರ ದನ, ಕುರಿ ಹಾಗೂ ಆಡುಗಳಿಗೆ ಅರಣ್ಯದಲ್ಲಿ ಮುಕ್ತವಾಗಿ ಮೇಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ರೈತ ಮುಖಂಡ ಶಿವನಗೌಡ ಪಾಟೀಲ ಹಾಗೂ ಕೃಷಿಕ ಡಿ.ಎಂ.ನದಾಫ್ ಮಾತನಾಡಿ, ಈಗಾಗಲೇ ಅನೇಕ ಕುರಿಗಾಯಿಗಳಿಂದ ದಂಡ ವಸೂಲಿ ಮಾಡಲಾಗಿದೆ. ಕೆಲವರಿಗೆ ರಸೀದಿ ನೀಡಿದ್ದರೆ, ಇನ್ನೂ ಕೆಲವರಿಗೆ ನೀಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ದನ, ಕುರಿ, ಆಡುಗಳು ಅರಣ್ಯ ಪ್ರವೇಶಿಸಿದರೆ ಸಾವಿರಾರು ರೂಪಾಯಿ ದಂಡ ವಿಧಿಸುವ ಅರಣ್ಯ ಇಲಾಖೆ, ಅದೇ ಅರಣ್ಯದಿಂದ ಕಾಡುಹಂದಿ, ಮೊಲ, ನರಿ, ತೋಳ, ಮಂಗ ಸೇರಿದಂತೆ ಹಲವು ಕಾಡುಪ್ರಾಣಿಗಳು ರೈತರ ಹೊಲಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಮಾಡಿದಾಗ ಅಲ್ಪ ಪ್ರಮಾಣದ ಪರಿಹಾರ ನೀಡಿ ಕೈತೊಳೆಯುತ್ತದೆ. ಇದು ರೈತರಿಗೆ ಒಂದು ನ್ಯಾಯ, ಇಲಾಖೆಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಆದ್ದರಿಂದ ವನ್ಯಜೀವಿ ಧಾಮವನ್ನು ರದ್ದುಗೊಳಿಸಿ ಜಾನುವಾರುಗಳಿಗೆ ಮುಕ್ತವಾಗಿ ಮೇಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಅಮೃತ ಗಂಡೋಶಿ ಮಾತನಾಡಿ, ಪ್ರತಿಭಟನಾಕಾರರು ಮುಂದಿಟ್ಟಿರುವ ಬೇಡಿಕೆಗಳನ್ನು ಇಲಾಖೆಯು ಕಾನೂನಿನ ಪ್ರಕಾರ ತಕ್ಷಣ ಒಪ್ಪಲು ಸಾಧ್ಯವಿಲ್ಲ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ವಶದಲ್ಲಿರುವ ಕುರಿಗಳನ್ನು ಅಗತ್ಯ ಬಾಂಡ್ ಪಡೆದು ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು, ಸಂಸದರು, ಸ್ಥಳೀಯ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವನ್ಯಜೀವಿ ಧಾಮ ರದ್ದುಗೊಳಿಸುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಹನುಮಂತ ಸನಮನಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅರಣ್ಯ ಅಧಿಕಾರಿಗಳು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕು ಹಾಗೂ ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಶಾಂತಗೊಂಡರು.ಕೊನೆಗೆ, ಜುಲೈ 15ರೊಳಗೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಂಬಂಧಿಸಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯ ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ವನ್ಯಜೀವಿ ಧಾಮ ಹಾಗೂ ಜಾನುವಾರುಗಳ ಮೇಯಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಪ್ರತಿಭಟನೆಯನ್ನು ಹಿಂಪಡೆದರು. ಬಳಿಕ ಪ್ರತಿಭಟನಾ ಸ್ಥಳದಲ್ಲೇ ತಾವು ಸಿದ್ಧಪಡಿಸಿದ್ದ ಊಟವನ್ನು ಸೇವಿಸಿದರು.ಪ್ರತಿಭಟನೆಯಲ್ಲಿ ಶಿವನಗೌಡ ಪಾಟೀಲ, ಸಿದ್ದಪ್ಪ ಬಳಗಾನೂರ, ಪರಶುರಾಮ ಮಂಟೂರ, ಹಸನಸಾಬ ನದಾಫ್, ಯಂಕಪ್ಪ ಕಲ್ಲಾರಿ, ಹನುಮಂತ ಬಿದರಿ, ಲಕ್ಷ್ಮಣ ಸುನಗದ, ಪ್ರಭು ತೋಳಮಟ್ಟಿ, ಗಂಗಪ್ಪ ತೋಳಮಟ್ಟಿ, ರಂಗಪ್ಪ ಲಕ್ಕನ್ನವರ, ಸಿದ್ದಪ್ಪ ಯಳ್ಳಿಗುತ್ತಿ, ಗಿರಿಯಪ್ಪ ಮೇಟಿ, ಸುರೇಶ ಪೂಜಾರಿ, ರಂಗನಾಥ ನಾಗರಾಳ, ರಾಜಪ್ಪ ಬಿದರಿ ಸೇರಿ ಹಲವರು ಭಾಗವಹಿಸಿದ್ದರು.