ಜಮಖಂಡಿ : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯ ನಡೆಯುತ್ತಿದ್ದು, ಬಿಎಲ್‌ಓಗಳಿಂದ ಅರ್ಜಿ ನಮೂನೆಗಳನ್ನು ಪಡೆದು ಕೊಂಡಿರುವ ಮತದಾರರು ವಾರದೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಮರಳಿ ನೀಡಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಮಾಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ

ತಹಸೀಲ್ದಾರ್‌ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಿಭಾಗ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ನಮೂನೆಗಳನ್ನು ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಮತದಾರರಿಗೆ ಅನುಕೂಲ ಕಲ್ಪಿಸಲು ನಗರದಲ್ಲಿ 10 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ, ಅಲ್ಲದೇ, ಪ್ರತಿ ಗ್ರಾಪಂ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾರರಿಗೆ ಫಾರ್ಮಗಳನ್ನು ಭರ್ತಿ ಮಾಡಲು ಸಹಾಯ ಕಲ್ಪಿಸಲಾಗುತ್ತಿದೆ. ಪ್ರತಿ ಗ್ರಾಮಗಳ ಬಿಎಲ್‌ಗಳ ಹೆಸರು ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದರು.

2002ರ ಮತದಾರರ ಪಟ್ಟಿಯೊಂದಿಗೆ ಬಿಎಲ್‌ಓಗಳು ಹಾಗೂ ಸಹಾಯಕರು ಕಾರ್ಯ

ಎಲ್ಲಾ ಕೇಂದ್ರಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಬಿಎಲ್‌ಓಗಳು ಹಾಗೂ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು, ಅರ್ಜಿಗಳನ್ನು ಭರ್ತಿ ಮಾಡಲು ಅವರ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂದರು.


ಮತದಾರರ ಪಟ್ಟಿಯಲ್ಲಿರುವರು ಮೃತ ಪಟ್ಟಿದ್ದರೆ ಅವರ ಮರಣ ದಾಖಲೆಯನ್ನು ಅವರ ಅರ್ಜಿಯೊಂದಿಗೆ ಸಲ್ಲಿಸಬೇಕು. ಅದರಂತೆ ಬೇರೆ ಗ್ರಾಮಗಳಿಗೆ ಹೋದವರು ತಮ್ಮ ಇಷ್ಟದ ಒಂದೇ ಕ್ಷೇತ್ರದಲ್ಲಿ ಭರ್ತಿ ಮಾಡಿರುವ ಫಾರ್ಮನ್ನು ಸಲ್ಲಿಸಬೇಕು ಎಂದು ವಿವರಿಸಿದರು. ನಮ್ಮ ಕ್ಷೇತ್ರದಲ್ಲಿ 146 ಜನರು ಮಾತ್ರ ಆನ್‌ ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರೆಲ್ಲರೂ ತಮ್ಮ ಸಂಖ್ಯೆಗಳನ್ನು ಬಿಎಲ್‌ಓಗಳಿಗೆ ನೀಡಬೇಕು ಎಂದರು. ತಹಸೀಲ್ದಾರ್‌ ಅನೀಲ ಬಡಿಗೇರ ಇದ್ದರು.