ಕೋಲ್ಕತ್ತಾ ಘಟನೆ: ಮಂಗಳೂರಲ್ಲಿ ಬೃಹತ್‌ ಪ್ರತಿಭಟನೆ, ದ.ಕ.ದಲ್ಲಿ ವೈದ್ಯಕೀಯ ಸೇವೆ ಬಂದ್‌

KannadaprabhaNewsNetwork |  
Published : Aug 18, 2024, 01:58 AM ISTUpdated : Aug 18, 2024, 07:59 AM IST
ಮಂಗಳೂರಲ್ಲಿ ವೈದ್ಯಾಧಿಕಾರಿಗಳ ಬೃಹತ್‌ ಪ್ರತಿಭಟನೆ  | Kannada Prabha

ಸಾರಾಂಶ

ನಗರದ ಐಎಂಎ ಹೌಸ್‌ನಿಂದ ಬೃಹತ್‌ ಮೌನ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಗೇಟಿನ ಬಳಿ ಕೊನೆಗೊಂಡಿತು. ಡಿಸಿ ಕಚೇರಿ ವರೆಗೆ ತೆರಳಲು ಪೊಲೀಸರು ಅನುಮತಿ ನೀಡಲಿಲ್ಲ.

 ಮಂಗಳೂರು :  ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಇತ್ತೀಚೆಗೆ ವೈದ್ಯೆಯ ರೇಪ್‌ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌(ಐಎಂಎ) ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ವೈದ್ಯರು ಹಾಗೂ ಸಿಬ್ಬಂದಿ ಹೊರರೋಗಿ ವಿಭಾಗ ಬಂದ್‌ ಮಾಡಿ 24 ಗಂಟೆಗಳ ಪ್ರತಿಭಟನೆಗೆ ಮುಂದಾದರು.

ಆ.17ರ ಬೆಳಗ್ಗೆ 6 ಗಂಟೆಯಿಂದ ಆ.18 ರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ತುರ್ತು ಚಿಕಿತ್ಸೆ ಹೊರತುಪಡಿಸಿ ಬೇರೆ ಯಾವುದೇ ಹೊರ ರೋಗಿ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಚಿಕಿತ್ಸೆಗೆ ಆಗಮಿಸಿದ ರೋಗಿಗಳು ಪರದಾಟ ನಡೆಸುವಂತಾಯಿತು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಗಮಸಿದ ರೋಗಿಗಳಿಗೆ ಮಾನವೀಯತೆ ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಮುಷ್ಕರದ ಮಾಹಿತಿ ಇಲ್ಲದೆ ಆಗಮಿಸಿದ ರೋಗಿಗಳು ವಾಪಸ್‌ ಮನೆಗೆ ಮರಳುವಂತಾಗಿದೆ.

ಮಂಗಳೂರಲ್ಲಿ ಬೃಹತ್‌ ಮೌನ ಪ್ರತಿಭಟನೆ:

ಮಂಗಳೂರಿನಲ್ಲಿ ಐಎಂಎ ವತಿಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಐಎಂಎ ಪದಾಧಿಕಾರಿಗಳು, ದಂತವೈದ್ಯಕೀಯ, ಆಯುಷ್‌, ರೆಡ್‌ಕ್ರಾಸ್‌ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು, ನರ್ಸಿಂಗ್‌ ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ, ನ್ಯಾಯಕ್ಕಾಗಿ ಆಗ್ರಹದ ಫಲಕ ಹಿಡಿದುಕೊಂಡು ಪಾಲ್ಗೊಂಡಿದ್ದರು. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌. ಡಾ.ಭರತ್‌ ಶೆಟ್ಟಿ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಗರದ ಐಎಂಎ ಹೌಸ್‌ನಿಂದ ಬೃಹತ್‌ ಮೌನ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಗೇಟಿನ ಬಳಿ ಕೊನೆಗೊಂಡಿತು. ಡಿಸಿ ಕಚೇರಿ ವರೆಗೆ ತೆರಳಲು ಪೊಲೀಸರು ಅನುಮತಿ ನೀಡಲಿಲ್ಲ. ಬಳಿಕ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮನವಿ ಸ್ವೀಕರಿಸಿ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.

ಸಿಬಿಐ ತನಿಖೆ, ನ್ಯಾಯಕ್ಕೆ ಆಗ್ರಹ:

ದಾರುಣವಾಗಿ ಅತ್ಯಾಚಾರಗೊಂಡು ಕೊಲೆಗೀಡಾದ ಕೋಲ್ಕತ್ತಾದ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಘಟನೆಯ ತನಿಖೆಯನ್ನು ಸಿಬಿಐ ವಹಿಸಿ ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಐಎಂಎ ಅಧ್ಯಕ್ಷ ಡಾ.ಅಶೋಕನ್‌, ನಿಯೋಜಿತ ಅಧ್ಯಕ್ಷೆ ಡಾ.ಜೆನ್ಸಿ ಮರಿಯಾ ಡಿಸೋಜಾ, ಡಾ.ರಂಜನ್‌ ಮತ್ತಿತರರಿದ್ದರು. ಡಿಸಿ ಕಚೇರಿಗೆ ತೆರಳಲು ಪೊಲೀಸರ ತಡೆ

ಐಎಂಎ ಸಂಘಟಿಸಿದ ವೈದ್ಯರ ಬೃಹತ್‌ ಪ್ರತಿಭಟನೆ ಡಿಸಿ ಕಚೇರಿ ಗೇಟಿನ ಬಳಿ ಆಗಮಿಸಿದಾಗ ಡಿಸಿ ಕಚೇರಿ ಆವರಣದ ಒಳಗೆ ತೆರಳಲು ಪೊಲೀಸರು ತಡೆದರು. ಈ ಬಗ್ಗೆ ಸಂಸದರು, ಶಾಸಕರು ಹಾಗೂ ಐಎಂಎ ಪದಾಧಿಕಾರಿಗಳು ಪ್ರಶ್ನಿಸಿದಾಗ, ನಿಷೇಧಾಜ್ಞೆ ಇರುವುದರಿಂದ ಮೆರವಣಿಗೆ ಒಳಗೆ ಪ್ರವೇಶಿಸುವಂತಿಲ್ಲ. ಮನವಿ ನೀಡಲು ಐದಾರು ಮಂದಿ ತೆರಳಬಹುದು ಎಂದರು.

ಪ್ರತಿಭಟನೆ ಬಗ್ಗೆ ಸರಿಯಾದ ವಿವರ ನೀಡದ ಕಾರಣ ಅನುಮತಿ ನೀಡಲಾಗುವುದಿಲ್ಲ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್‌ ತಿಳಿಸಿದರು. ವೈದ್ಯರು ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸುತ್ತಿಲ್ಲ, ಹಾಗಾಗಿ ಮನವಿ ಸಲ್ಲಿಸಲು ಕಚೇರಿ ಆವರಣ ಪ್ರವೇಶಕ್ಕೆ ಅವಕಾಶ ನೀಡುವಂತೆ ಸಂಸದ, ಶಾಸಕರು ಮನವಿ ಮಾಡಿದರೂ ಪೊಲೀಸರು ಕೇಳಲಿಲ್ಲ. ಕೊನೆಗೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳನ್ನೇ ಸ್ಥಳಕ್ಕೆ ಕರೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ