- ತೋಟಗಳಲ್ಲಿ ಅಂತರ್ಜಲ ಹೆಚ್ಚಳ । ಮಾಲೀಕರಲ್ಲಿ ಸಂಭ್ರಮ - - - ಎಚ್.ಎಂ. ಸದಾನಂದ
ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ರಂಗನಾಥ ಸ್ವಾಮಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.
ಹಾಲಿವಾಣ ಗ್ರಾಮ ಪಂಚಾಯಿತಿಗೆ ಸೇರ್ಪಡೆಯಾದ ಕೊಮಾರನಹಳ್ಳಿ ಗ್ರಾಮದ ಈ ಕೆರೆಗೆ ಎರಡು ತಿಂಗಳಿಂದ ಭದ್ರಾ ನಾಲೆಯಿಂದ ನೀರು ಹರಿಸಲಾಗಿದೆ. ಜೊತೆಗೆ ಒಂದು ವಾರದಿಂದ ಸುರಿದ ಭಾರಿ ಮಳೆಗೆ ಕೆರೆಯು ಭರ್ತಿಯಾಗಿ ಕೋಡಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಹಾಗೂ ಈ ಭಾಗದ ರೈತರಲ್ಲಿ ಹರ್ಷ ತಂದಿದೆ.ಸರ್ವೆ ನಂ. ೭೩ರಲ್ಲಿನ ೯೭.೩೫ಎ ಕರೆ ವಿಸ್ತೀರ್ಣದ ಈ ಕೆರೆಯು ಭರ್ತಿಯಾಗಿ ನೂರಾರು ತೋಟಗಳಲ್ಲಿ ಅಂತರ್ಜಲ ಹೆಚ್ಚಳವಾದ ಕಾರಣ ಮಾಲೀಕರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಸದರಿ ಕೆರೆಗೆ ಎರೆಹಳ್ಳ, ಹಾಲುವರ್ತಿ ಹಳ್ಳಿ, ಅಗಸನಕಟ್ಟೆಯಿಂದ ಹೆಚ್ಚು ನೀರು ಹರಿದಿದ್ದು, ಭರ್ತಿಯಾಗಲು ಕಾರಣವಾಗಿದೆ. ನೀರಿನ ಶುಚಿ ಹಾಳಾಗದ ಕಾರಣಕ್ಕಾಗಿ ಕೆರೆಯಲ್ಲಿ ಯಾವುದೇ ವಾಹನಗಳನ್ನು ತೊಳೆಯಬಾರದು ಎಂಬ ಫಲಕವನ್ನು ಗ್ರಾಮಸ್ಥರು ಅಳವಡಿಸಿದ್ದಾರೆ. ಕೆರೆಯ ಪ್ರದೇಶ ಅಂದವಾಗಿ ಕಾಣುವಂತೆ ಪೂರಕವಾಗಿ ಕಂದಾಯ ಅಧಿಕಾರಿಗಳು ಕೆರೆ ದಂಡೆಯಲ್ಲಿನ ಶೆಡ್‌ಗಳನ್ನು ತೆರವು ಮಾಡಿದ್ದಾರೆ.
ಕಾರ್ತಿಕ ಮಾಸದಲ್ಲಿ ಮಾತ್ರ ತೆಪ್ಪೋತ್ಸವ ಹಾಗೂ ದೀಪೋತ್ಸವ ಆಚರಿಸುವ ಸಂಪ್ರದಾಯವಿದೆ. ದೀಪಾವಳಿ ಸಮೀಪ-ಬರುವ ನವೆಂಬರ್‌ನಲ್ಲಿ ಆ ಸಾಧ್ಯತೆ ಹೆಚ್ಚಾಗಿದ್ದು ಪುಣ್ಯಾಹ, ಭೂತಸೇವೆ, ದೀಪಾರಾಧನೆ, ವಿಷ್ಣುವಿನ ಸಾನಿಧ್ಯ, ವಿಷ್ಣು ಸಹಸ್ರನಾಮ, ಕುಂಕುಮಾರ್ಚನೆ, ಅನ್ನಸಂತರ್ಪಣೆ ಇನ್ನತರೆ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ ಎಂದು ರಂಗನಾಥ ಸ್ವಾಮಿ ದೇವಾಲಯದ ಅರ್ಚಕ ಗುರುರಾಜಾಚಾರ್ ತಿಳಿಸಿದ್ದಾರೆ.
ಮತ್ತೊಂದು ತೆಪ್ಪೋತ್ಸವ ಆಚರಿಸಲಿಕ್ಕೆ ಕೊಮಾರನಹಳ್ಳಿ ಗ್ರಾಮಸ್ಥರು ಆಸಕ್ತಿ ತೋರಬೇಕಿದ್ದು, ಈ ಕುರಿತು ಚರ್ಚೆ ಆರಂಭವಾಗಿದೆ. ಮುಂಬರುವ ಶುಕ್ರವಾರ ಸರಳವಾಗಿ ಬಾಗಿನ ಅರ್ಪಿಸಲಾಗುವುದು ಎನ್ನಲಾಗಿದೆ.- - - -೧೫-ಎಂಬಿಆರ್೩: ಕೊಮಾರನಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು.