ಕೋರ್ಟ್ ತೀರ್ಪು ನನ್ನ ಪರವಿದ್ದರೂ ದೊರೆಯದ ನ್ಯಾಯ । ದಯಾಮರಣ ಕೋರಿಕೆಗೆ ನಿರ್ಧಾರಕನ್ನಡಪ್ರಭವಾರ್ತೆ ಚನ್ನಪಟ್ಟಣ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ವ್ಯಾಜ್ಯ ಕುರಿತು ಸ್ಥಳೀಯ ನ್ಯಾಯಾಲದಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಎಲ್ಲೆಡೆ ನನ್ನ ಪರವೇ ತೀರ್ಪು ಬಂದಿದ್ದರೂ ನನಗೆ ನ್ಯಾಯ ಸಿಗುತ್ತಿಲ್ಲ. ಕನ್ನಮಂಗಲದ ಸರ್ವೆ ನಂ.೨೫೫ರಲ್ಲಿ ೯ ಎಕರೆ ಜಮೀನು ೧೯೭೧ರಲ್ಲೇ ನನಗೆ ಸರ್ಕಾರದಿಂದ ಮಂಜೂರಾಗಿದೆ. ೧೯೮೦ರಲ್ಲಿ ಕಾಂತರಾಜು ಅವರ ತಂದೆ ವಿ.ರಾಮು ಅವರಿಗೆ ಸರ್ವೆ ನಂ.೨೮೭ರಲ್ಲಿ ಸೇನಾ ಮೀಸಲಾತಿಯಲ್ಲಿ ಸರ್ಕಾರ ೪ ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ನನ್ನ ಜಮೀನು ಹಾಗೂ ಸುತ್ತಮುತ್ತ ಸರ್ಕಾರಿ ಗೋಮಾಳ ಸೇರಿದಂತೆ ೨೧ ಎಕರೆ ಜಮೀನನ್ನು ರಾಮು ಕುಟುಂಬ ವಶಪಡಿಸಿಕೊಂಡು ತಮ್ಮದು ಎನ್ನುತ್ತಿದ್ದಾರೆ. ಸದರಿ ಜಮೀನಿನ ವಿಚಾರವಾಗಿ ಚನ್ನಪಟ್ಟಣದ ಮುನ್ಸಿಫ್ ನ್ಯಾಯಾಲಯದಲ್ಲಿ ೧೯೮೯ರಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯ ೧೯೯೭ರಲ್ಲಿ ಪರ್ಮನೆಂಟ್ ಇಂಜೆಕ್ಷನ್ ಆದೇಶವನ್ನು ಜಾರಿ ಮಾಡಿ ನನ್ನ ಪರ ತೀರ್ಪು ನೀಡಿದೆ. ಈ ವಿಚಾರವಾಗಿ ರಾಮು ಮನೆಯವರು ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಗಳಿಗೆ ಸಲ್ಲಿಸಿದ್ದ ಮೇಲ್ಮನವಿ ಸೇರಿ ಎಲ್ಲೆಡೆ ಇವರ ಮೊಕದ್ದಮೆ ವಜಾ ಆಗಿದೆ. ಇಷ್ಟೆಲ್ಲ ತೀರ್ಪುಗಳು ನನ್ನ ಪರವಿದ್ದರೂ ನನ್ನ ಜಮೀನಿನಲ್ಲಿ ನೆಮ್ಮದಿಯಾಗಿ ವ್ಯವಸಾಯ ಮಾಡಲು ಬಿಡುತ್ತಿಲ್ಲ ಎಂದು ಅಲವತ್ತುಕೊಂಡರು.
ಜಮೀನು ವ್ಯಾಜ್ಯ ಕುರಿತು ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ೪ ಬಾರಿ ಪ್ರಕರಣ ಹಾಗೂ ಅರಣ್ಯ ಇಲಾಖೆಯಲ್ಲಿ ಎರಡು ಬಾರಿ ಪ್ರಕರಣ ದಾಖಲಿಸಲಾಗಿದೆ. ಏನು ಮಾಡಿದರೂ ಕಾಂತರಾಜು ಪ್ರಭಾವ ಬಳಸಿಕೊಂಡು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪರ್ಮನೆಂಟ್ ಇಂಜೆಕ್ಷನ್ ಆದೇಶವಿದ್ದರೂ ನನ್ನ ಜಮೀನಿನಲ್ಲಿ ಅನಧಿಕೃತ ಮನೆ ನಿರ್ಮಿಸಲು ಮುಂದಾಗಿದ್ದು, ಎಂ.ಕೆ.ದೊಡ್ಡಿ ಠಾಣೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸುತ್ತಿಲ್ಲ. ನನ್ನ ಜಮೀನನನ್ನು ಸ್ವಾಧೀನಪಡಿಸಿಕೊಳ್ಳಲು ಕಾಂತರಾಜು ಸಾಕಷ್ಟು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಗಳಲ್ಲಿ ದಾವೆ ಹೂಡಿದರಾದರೂ ಅವೆಲ್ಲಾ ದಾವೆ ವಜಾಗೊಂಡಿವೆ. ಜಮೀನಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಅವರು ಒದಗಿಸಿದ್ದೇ ಆದಲ್ಲಿ ಜಮೀನನ್ನು ಬಿಟ್ಟುಕೊಡಲು ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.ನನಗೆ ಈಗಾಗಲೇ ೭೮ ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದೇನೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕಾಂತರಾಜು ಹಾಗೂ ಅವರ ಕುಟುಂಬದವರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪೊಲೀಸ್ ಇಲಾಖೆ ಯಾವುದೇ ರಕ್ಷಣೆ ನೀಡುತ್ತಿಲ್ಲ. ಈ ಹಿನ್ನೆಲೆ ದಯಾಮರಣಕ್ಕೆ ಕೋರಿ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.