Govt Hospital ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ವೈದ್ಯರೊಬ್ಬರ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು
ದೊಡ್ಡಬಳ್ಳಾಪುರ: ತಾಲೂಕಿನ ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ವೈದ್ಯರೊಬ್ಬರ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ಜಿ.ಲಕ್ಷ್ಮೀಪತಿ, ಇಲ್ಲಿನ ವೈದ್ಯಾಧಿಕಾರಿಯಾಗಿರುವ ಮಹಿಳಾ ವೈದ್ಯರು ಹಳ್ಳಿಗರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಗ್ರಾಮಸ್ಥರು ತಲೆನೋವು, ಜ್ವರ, ಕೆಮ್ಮು, ನೆಗಡಿ ಎಂದು ಆಸ್ಪತ್ರೆಗೆ ಬಂದರೆ ರೋಗಿಗಳಿಗೆ ಏಕವಚನದಲ್ಲಿ ನಿಂದಿಸಿ ಬೇಕಾಬಿಟ್ಟಿಯಾಗಿ ಚಿಕಿತ್ಸೆ ನೀಡಿ ಕಳಿಸುತ್ತಿದ್ದಾರೆ. ಹೆಚ್ಚಿಗೆ ಪ್ರಶ್ನಿಸಿದರೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ರೋಗಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ ಎಂದು ದೂರಿದರು.
ಜನರೊಂದಿಗೆ ಕನಿಷ್ಟ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ ಎಂದ ಮೇಲೆ, ಇಂತಹ ವೈದ್ಯರು ನಮ್ಮೂರಿಗೆ ಬೇಡ. ಕೂಡಲೇ ವರ್ಗಾವಣೆ ಮಾಡಿ ನೂತನ ವೈದ್ಯರನ್ನು ನೇಮಿಸಬೇಕು. ಈ ಬಗ್ಗೆ ಪಂಚಾಯತಿಯ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದೆ. ಒಂದು ವಾರದಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದರು.
ಸಮಸ್ಯೆ ಆಲಿಸಿದ ತಾಲೂಕು ವೈದ್ಯಾಧಿಕಾರಿ:
ಸ್ಥಳಕ್ಕೆ ದೌಡಾಯಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಶಾರದಾ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿ, ಹಿಂದೆಯೂ ಇಂತಹ ದೂರುಗಳು ಬಂದಿದ್ದವು. ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಸರಿಯಲ್ಲ. ಗ್ರಾಮಸ್ಥರ ಮನವಿ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಪಿಡಿಓ ಕಾಂತರಾಜು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಜ್ಯೋತಿ, ಚಾಂದಿನಿ, ಗ್ರಾಮಸ್ಥರಾದ ಆನಂದ್, ರಮೇಶ್ ಮತ್ತಿತ್ತರರು ಇದ್ದರು.
14ಕೆಡಿಬಿಪಿ1-
ದೊಡ್ಡಬಳ್ಳಾಪುರದ ಕೊನಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ವೈದ್ಯರ ವರ್ಗಾವಣೆಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.