ದೊಡ್ಡಬಳ್ಳಾಪುರ: ಆಧುನಿಕ ದೊಡ್ಡಬಳ್ಳಾಪುರದ ನಿರ್ಮಾತೃ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 166ನೇ ಜನ್ಮದಿನಾಚರಣೆಯನ್ನು ಇಲ್ಲಿನ ನಗರಸಭೆ, ದೇವಾಂಗ ಮಂಡಲಿ ಸೇರಿ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಶಿಕ್ಷಣದಿಂದ ಮಾತ್ರ ಸಾಮುದಾಯಿಕ ಬೆಳವಣಿಗೆ ಹಾಗೂ ಮುನ್ನಡೆ ಸಾಧ್ಯ. ಸಾಮಾಜಿಕ ಪಿಡುಗುಗಳಿಗೆ ಸಂಜೀವಿನಿಯಾಗುವುದು ಸುಶಿಕ್ಷಿತ ಸಮಾಜ ಮಾತ್ರ. ಶಿಕ್ಷಣ ಮೌಲ್ಯಗಳನ್ನು ಕೊಡುವ ಮತ್ತು ಪಡೆದುಕೊಳ್ಳುವ ಸಾಧನವಾಗಬೇಕು ಎಂದು ಕೊಂಗಾಡಿಯಪ್ಪ ನಂಬಿದ್ದರು. ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಛಕ್ತಿ, ರೈಲು, ನೀರು ಸರಬರಾಜು, ನೈಮ೯ಲ್ಯ ಸುಧಾರಣೆ, ವನಮಹೋತ್ಸವ ಸೇರಿ ಅನೇಕ ಸಾಮಾಜಿಕ ಯೋಜನೆ ತರುವಲ್ಲಿ ಅವರ ಪಾತ್ರ ಹಿರಿದು ಎಂದು ಸ್ಮರಿಸಿದರು.
ನೇಕಾರಿಕೆಯ ಸಮಗ್ರ ಅಭಿವೃದ್ದಿ ಹಾಗೂ ಪುರೋಭಿವೃದ್ದಿ ಅವರ ಗುರಿಯಾಗಿತ್ತು. ಶಿಕ್ಷಣ ತಜ್ಞ, ಪ್ರಾಮಾಣಿಕತೆಯ ಪ್ರತಿರೂಪ ಕೊಂಗಾಡಿಯಪ್ಪ ಇಂದಿನ ಯುವಕರ ಆದರ್ಶವಾಗಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನ ಊರಿನ ಬೆಳವಣಿಗೆಯ ದೃಷ್ಟಯಿಂದ ಅತ್ಯಂತ ಮುಖ್ಯ. ಅವರ ಸ್ಮರಣೆ ನಿರಂತರತೆ ಕಾಯ್ದುಕೊಳ್ಳುವಲ್ಲಿ ಶಾಶ್ವತ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.ದೊಡ್ಡಬಳ್ಳಾಪುರದ ನೂತನ ನಗರಸಭೆ ಕಟ್ಟಡದ ಮುಂಭಾಗ ನಿರ್ಮಿಸಲು ಉದ್ದೇಶಿಸಿರುವ ಕೊಂಗಾಡಿಯಪ್ಪ ಅವರ ಆಳೆತ್ತರದ ಪ್ರತಿಮೆ ಸಂಬಂಧಿತ ಪ್ರಕ್ರಿಯೆಗಳು ನಡೆಯುತ್ತಿದ್ದು, ಆದಷ್ಟೂ ಶೀಘ್ರ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಇಲ್ಲಿನ ಸಂಜಯನಗರದಲ್ಲಿರುವ ಕೊಂಗಾಡಿಯಪ್ಪ ಅವರ ಸಮಾಧಿ ಸ್ಥಳದಲ್ಲಿ ಬೆಳಗ್ಗೆ ನಗರಸಭೆ ವತಿಯಿಂದ ಪೂಜಾ ಕಾರ್ಯಕ್ರಮ ನಡೆಯಿತು.
ದೊಡ್ಡಬಳ್ಳಾಪುರದಲ್ಲಿ ಕೊಂಗಾಡಿಯಪ್ಪ 166ನೇ ಜನ್ಮದಿನಾಚರಣೆ ಅಂಗವಾಗಿ ಮಾರುಕಟ್ಟೆ ಚೌಕದ ಬಳಿ ಇರುವ ಪುತ್ಥಳಿ ಮುಂಭಾಗ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.