ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್‌ ರಚನೆಗೆ ಲೋಕಸಭೆಯಲ್ಲಿ ಕ್ಯಾ. ಬ್ರಿಜೇಶ್‌ ಚೌಟ ಪ್ರಸ್ತಾಪ

KannadaprabhaNewsNetwork | Published : Mar 19, 2025 12:35 AM

ಸಾರಾಂಶ

ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡಿದ ದ.ಕ. ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೆ ಇಲಾಖೆಯಲ್ಲಿ ಆಗಿರುವ ಗಮನಾರ್ಹ ಅಭಿವೃದ್ಧಿ ಕಾರ್ಯ-ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೊಂಕಣ ರೈಲ್ವೆ ನಿಗಮದ ವಿಲೀನ, ಮಂಗಳೂರು ರೈಲ್ವೆ ವ್ಯಾಪ್ತಿ ಆಡಳಿತಾತ್ಮಕ ಪುನರ್ ರಚನೆ ಸೇರಿದಂತೆ ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಲೋಕಸಭೆಯಲ್ಲಿ ಸದನದ ಗಮನ ಸೆಳೆದಿದ್ದಾರೆ.

ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೆ ಇಲಾಖೆಯಲ್ಲಿ ಆಗಿರುವ ಗಮನಾರ್ಹ ಅಭಿವೃದ್ಧಿ ಕಾರ್ಯ-ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸುಮಾರು ಒಂದು ದಶಕಗಳಿಂದ ವಿಸ್ತರಣೆಗೆ ಕಾಯುತ್ತಿದ್ದ ಮಂಗಳೂರು-ಪುತ್ತೂರು-ಕಬಕ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್ ಗೆ ವಿಸ್ತರಿಸಿರುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ ಅವರು, ಇದರಿಂದ ದಿನನಿತ್ಯ ಓಡಾಡುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸದನದ ಗಮನಸೆಳೆದ ಸಂಸದ ಕ್ಯಾ. ಚೌಟ ಅವರು, ಆರ್ಥಿಕವಾಗಿ ಹಲವಾರು ಸವಾಲು ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮ(ಕೆಆರ್‌ಸಿಎಲ್)ವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ನಿಗಮದ ಸುಮಾರು 2,589 ಕೋಟಿ ರು. ಸಾಲದ ಹೊರೆಯನ್ನು ತಪ್ಪಿಸಿ ಆರ್ಥಿಕ ಸದೃಢತೆಯನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.

ಇನ್ನು ಬಹಳ ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಅಡೆ-ತಡೆ ದೂರ ಮಾಡುವ ಬಗ್ಗೆ ಪ್ರಸ್ತಾಪಿಸಿದ ಕ್ಯಾ. ಚೌಟ ಅವರು, ಮಂಗಳೂರು ರೈಲ್ವೆ ಭಾಗದ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆ ವಲಯದ ಫಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಅದನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವ ಮೈಸೂರು ವಿಭಾಗಕ್ಕೆ ಸೇರಿಸಬೇಕು. ಇದರಿಂದ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಎಚ್ಎಂಆರ್‌ಡಿಸಿ ವಿಲೀನಗೊಳ್ಳಲಿ:

ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕದ ಬಗ್ಗೆಯೂ ಉಲ್ಲೇಖಿಸಿದ ಸಂಸದ ಕ್ಯಾ. ಚೌಟ ಅವರು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿ(ಎಚ್ಎಂಆರ್‌ಡಿಸಿ)ಯನ್ನು ಕೂಡ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು ಅಥವಾ ಕರ್ನಾಟಕ ಸರ್ಕಾರದ ಅದರ ಸಂಪೂರ್ಣ ಹಣವನ್ನು ನೀಡಿ ಆ ಮೂಲಕ ಸರಕು ಸಾಗಣೆ ಹಾಗೂ ಪ್ರಯಾಣಿಕರ ದಟ್ಟಣೆ ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

Share this article