ಕೊಪ್ಪಳ ಜಿಲ್ಲೆ ಅತ್ಯಾಚಾರಿಗೆ 20 ವರ್ಷ ಕಠಿಣ ಶಿಕ್ಷೆ, 35 ಸಾವಿರ ದಂಡ

KannadaprabhaNewsNetwork | Published : Mar 20, 2025 1:19 AM

ಸಾರಾಂಶ

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.

- ಬಲವಂತವಾಗಿ ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ ಹನುಮಂತ

- ದಾವಣಗೆರೆ ಬಸ್‌ ನಿಲ್ದಾಣದಲ್ಲಿ ಅಪ್ರಾಪ್ತೆ ಬಳಿಗೆ ಬಂದು ಮದುವೆ ಆಗುವುದಾಗಿ ಪುಸಲಾಯಿಸಿದ್ದ- - -ಕನ್ನಡಪ್ರಭ ವಾರ್ತೆ ದಾವಣಗೆರೆ

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ವಾಸಿ ಹನುಮಂತ ಅಲಿಯಾಸ್ ಹನುಮೇಶ (20) ಶಿಕ್ಷೆಗೆ ಗುರಿಯಾದ ಆರೋಪಿ. 2023ರ ಫೆ.11ರಂದು ಬೆಳಗ್ಗೆ ಶಾಲೆಗೆ ಹೋಗಿದ್ದ 13 ವರ್ಷದ ಅಪ್ರಾಪ್ತೆ ನಾಪತ್ತೆಯಾಗಿದ್ದಳು. ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಪರಾಧಿ ಹನುಮಂತ ದಾವಣಗೆರೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಅಪ್ರಾಪ್ತೆ ಬಳಿಗೆ ಬಂದು ಮದುವೆಯಾಗುವುದಾಗಿ ಪುಸಲಾಯಿಸಿ, ಒತ್ತಾಯದಿಂದ ಬಸ್‌ನಲ್ಲಿ ಅದೇ ದಿನ ಸಂಜೆ ಬೆಂಗಳೂರಿಗೆ ಕರೆದೊಯ್ದಿದ್ದ. ಬಿಇಎಲ್‌ ಲೇಔಟ್‌ನ ಭರತ್ ನಗರದ ತಾತ್ಕಾಲಿಕ ಶೆಡ್‌ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಇನ್‌ಪೆಕ್ಟರ್, ತನಿಖಾಧಿಕಾರಿ ಮಲ್ಲಮ್ಮ ಚೌಬೆ ಹನುಮಂತನ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಪ್ರಕರಣ ವಿಚಾರಣೆ ನಡೆಸಿ, ಹನುಮಂತನನ್ನು ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ಪ್ರಕಟಿಸಿದರು. ಆರೋಪಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದುದರಿಂದ ಬಂಧನದ ಅವಧಿ ಪರಿಗಣಿಸಿ, ಇನ್ನುಳಿದ ಶಿಕ್ಷಾ ಅವಧಿಯನ್ನು ಅನುಭವಿಸುವಂತೆ ಆದೇಶಿಸಿದರು.

ಅಪರಾಧಿಯಿಂದ ವಸೂಲು ಮಾಡಿದ ದಂಡದ ಮೊತ್ತ ₹35 ಸಾವಿರವನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶರು ತೀರ್ಪು ನೀಡಿದರು. ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿದರು. ಇಲಾಖೆ ಅಧಿಕಾರಿಗಳ ಕರ್ತವ್ಯನಿಷ್ಠೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)

Share this article