ಮುಂಬೈ, ದೆಹಲಿ ಮಾದರಿ ಹೋಳಿಯಾಟಕ್ಕೆ ಕೊಪ್ಪಳ ಫಿದಾ

KannadaprabhaNewsNetwork |  
Published : Mar 15, 2025, 01:00 AM IST
14ಕೆಪಿಎಲ್201,202 ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಆಯೋಜನೆ ಮಾಡಿದ್ದ ಹೋಳಿಯಾಟದಲ್ಲಿ ಹುಚ್ಚೆದ್ದು ಕುಣಿಯುತ್ತಿರುವ ಯುವತಿಯರು | Kannada Prabha

ಸಾರಾಂಶ

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹೋಳಿಯಾಟದಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಸಂಗೀತಕ್ಕೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ಹುರಿದುಂಬಿಸಿದರು.

ಕೊಪ್ಪಳ:

ಇದೇ ಮೊದಲ ಬಾರಿಗೆ ಜಿಲ್ಲಾ ಅಥ್ಲೆಟಿಕ್ಸ್ ವತಿಯಿಂದ ಶುಕ್ರವಾರ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದೆಹಲಿ, ಬಾಂಬೆ ಮಾದರಿಯ ಹೋಳಿಯಾಟಕ್ಕೆ ಇಡೀ ಕೊಪ್ಪಳ ನಗರವೇ ಹುಚ್ಚೆದ್ದು ಕುಣಿಯಿತು. ಯುವಕರು-ಯುವತಿಯರು ರೇನ್‌ ಡಾನ್ಸ್‌ನಲ್ಲಿ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದಕ್ಕೆ ಆರ್ಕೆಸ್ಟ್ರಾ ಮತ್ತಷ್ಟು ಮೆರಗು ನೀಡಿತು. ಸಾವಿರಾರು ಜನರು ಒಂದೇ ಸ್ಥಳದಲ್ಲಿ ಸೇರಿ ಇದೇ ಮೊದಲ ಬಾರಿಗೆ ಹೋಳಿ ಆಚರಿಸಿ ಸಂಭ್ರಮಿಸಿದರು.

ಹೆಜ್ಜೆ ಹಾಕಿದ ಜನಪ್ರತಿನಿಧಿಗಳು:

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹೋಳಿಯಾಟದಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಸಂಗೀತಕ್ಕೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ಹುರಿದುಂಬಿಸಿದರು. ಇದಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಗೂಳಪ್ಪ ಹಲಿಗೇರಿ, ಅಮರೇಶ ಕರಡಿ, ಶರಣಪ್ಪ ಸಜ್ಜನ ಸೇರಿದಂತೆ ಅನೇಕರು ಸಾಥ್ ನೀಡಿದರು.

ಮತ್ತೆ ರಂಗು:

ಹಲವು ವರ್ಷಗಳಿಂದ ಕೊಪ್ಪಳದಲ್ಲಿ ಹೋಳಿ ಆಚರಣೆ ನಡೆಯುತ್ತಿತ್ತು. ಗ್ರಾಮೀಣ ಪ್ರದೇಶದಿಂದ ಎತ್ತಿನ ಬಂಡಿಯಲ್ಲಿ ಆಗಮಿಸಿ ಬಣ್ಣದಾಟದಲ್ಲಿ ಮಿಂದೇಳುತ್ತಿದ್ದರು. ಕಾಲಕ್ರಮೇಣ ಹಬ್ಬ ಕಳೆಗುಂದಿತು. ಇದೀಗ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್‌ ದೆಹಲಿ ಹಾಗೂ ಮುಂಬೈ ಮಾದರಿಯಲ್ಲಿ ಹೋಳಿ ಆಚರಣೆ ಆಯೋಜಿಸುವು ಮೂಲಕ ಮತ್ತೆ ಹಳೆಯ ಮೆರಗು ತಂದಿದೆ.

ಕಾಂಗ್ರೆಸ್ ಹೋಳಿ:

ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್‌ ಪಕ್ಷಾತೀತ ಸಂಘಟನೆಯಾಗಿದ್ದರೂ ಹೋಳಿಯಾಟದಲ್ಲಿ ಕಾಂಗ್ರೆಸ್ ನಾಯಕರು ಮಾತ್ರ ಕಾಣಿಸಿಕೊಂಡರು. ಕೆಲವರು ಇದು ಕಾಂಗ್ರೆಸ್ ಹೋಳಿ ಎಂದು ಕಾರ್ಯಕ್ರಮದಿಂದ ದೂರುವುಳಿದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೋಳಿಯಾಟಕ್ಕೆ ಇದೀಗ ರಾಜಕೀಯ ಬಣ್ಣ ಅಂಟಿಕೊಂಡಿದೆ.

ದೆಹಲಿ ಹಾಗೂ ಮುಂಬೈ ಮಾದರಿಂದಯಲ್ಲಿ ಹೋಳಿ ಹಬ್ಬವನ್ನು ಸಂಸದ ರಾಜಶೇಖರ ಹಿಟ್ನಾಳ ಆಯೋಜಿಸಿರುವುದು ಶ್ಲಾಘನೀಯ. ಹೋಳಿಯಾಟವನ್ನು ವ್ಯವಸ್ಥಿತ ಸಂಘಟಿಸುವ ಮೂಲಕ ಹಬ್ಬಗಳನ್ನು ಹೇಗೆ ಆಚರಿಸಬೇಕು ಎಂಬುದನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಹಬ್ಬಗಳನ್ನು ಆಚರಿಸಬೇಕು ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.ಈ ರೀತಿಯ ಆಚರಣೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವುದರಿಂದ ಪ್ರೀತಿ, ಬಾಂಧವ್ಯ ಮತ್ತೊಷ್ಟು ವೃದ್ಧಿಯಾಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಕೊಪ್ಪಳದಲ್ಲಿ ಮೊದಲ ಬಾರಿಗೆ ಈ ರೀತಿಯ ಹೋಳಿ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಎಲ್ಲರೂ ಸಂಭ್ರಮಿಸುವಂತೆ ಮಾಡಿದ್ದು ಶ್ಲಾಘನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ