;Resize=(412,232))
ಕೊಪ್ಪಳ : ಕೇವಲ ಎರಡು ದಿನಗಳ ಅಂತರದಲ್ಲಿ ಐದು ಬಾಲ್ಯ ವಿವಾಹ ಆಗಬಹುದಾಗಿದ್ದನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದಿದ್ದಾರೆ.
ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ, ಬಾಲಕಿಯರನ್ನು ಮದುವೆ ಮಾಡಲು ನಡೆಸಿದ ಸಿದ್ಧತೆಯ ಕುರಿತು ಮಾಹಿತಿ ನೀಡಿದ್ದನ್ನು ಆಧರಿಸಿ ಕಾರ್ಯಚರಣೆ ನಡೆದಿದೆ. ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಐದು ಬಾಲ್ಯವಿವಾಹ ತಡೆ ಹಿಡಿದಿದ್ದಾರೆ.
ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಬಾಲಕಿಯರಿಗೆ, ಯಲಬುರ್ಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಬ್ಬ ಬಾಲಕಿಗೆ, ಕಾರಟಗಿ ತಾಲೂಕಿನ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತೆಯರನ್ನು ರಕ್ಷಿಸಲಾಗಿದೆ. ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ, ಅಕ್ಕ ಪಡೆ ಮತ್ತು ಪೊಲೀಸರು, ವಲಯ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯ, ಪುರಸಭೆಯ ಸಿಬ್ಬಂದಿ ಸಹಯೋಗದೊಂದಿಗೆ ಐದು ಜನರನ್ನು ರಕ್ಷಿಸಿ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಜಿಲ್ಲೆಯಲ್ಲಿ ನಡೆಯಬಹುದಾಗಿದ್ದ ಐದು ಬಾಲ್ಯವಿವಾಹಗಳನ್ನು ಖಚಿತ ಮಾಹಿತಿ ಆಧಾರದ ಮೇಲೆ ನಮ್ಮ ಸಿಬ್ಬಂದಿ ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ.
-ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಕೊಪ್ಪಳ.