ಎಸ್ಸೆಸ್ಸೆಲ್ಸಿ 100% ರಿಸಲ್ಟ್‌ಗೆ ಕೊಪ್ಪಳ ಶಾಲೆಗಳ ಅಡ್ಡದಾರಿ

KannadaprabhaNewsNetwork |  
Published : Jul 11, 2025, 01:47 AM ISTUpdated : Jul 11, 2025, 11:14 AM IST
SSLC exam begins in Karnataka from today

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆ ಶೇಕಡ 100ರಷ್ಟು ಫಲಿತಾಂಶ ಪಡೆದುಕೊಳ್ಳಬೇಕೆಂದು ಖಾಸಗಿ ಶಾಲೆಗಳು 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿಗೆ ಬರುವ ಮುನ್ನವೇ ‘ಜಾಣರಿಲ್ಲ’ ಎನ್ನುವ ಕಾರಣಕ್ಕೆ ಶಾಲೆಯಿಂದ ಕೆಲ ವಿದ್ಯಾರ್ಥಿಗಳನ್ನು ಆಚೆ ಅಟ್ಟುತ್ತಿದ್ದಾರೆ.  

ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆ ಶೇಕಡ 100ರಷ್ಟು ಫಲಿತಾಂಶ ಪಡೆದುಕೊಳ್ಳಬೇಕೆಂದು ಖಾಸಗಿ ಶಾಲೆಗಳು 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿಗೆ ಬರುವ ಮುನ್ನವೇ ‘ಜಾಣರಿಲ್ಲ’ ಎನ್ನುವ ಕಾರಣಕ್ಕೆ ಶಾಲೆಯಿಂದ ಕೆಲ ವಿದ್ಯಾರ್ಥಿಗಳನ್ನು ಆಚೆ ಅಟ್ಟುತ್ತಿದ್ದಾರೆ. ವಿಧಿಯಿಲ್ಲದೆ ವಿದ್ಯಾರ್ಥಿಗಳು ಮತ್ತೊಂದು ಶಾಲೆ ಹುಡುಕಿಕೊಂಡು ಹೋಗುತ್ತಿದ್ದಾರೆ.

ಜಿಲ್ಲಾದ್ಯಂತ ನೂರಾರು ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳು ಹೊರದಬ್ಬಲಾಗಿದೆ. ಹೀಗೆ ಶಾಲೆಯಿಂದ ಹೊರಬಿದ್ದ ಮಕ್ಕಳು ಹತ್ತನೇ ತರಗತಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.

ಏನಿದು ಸಮಸ್ಯೆ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಬರಲೇಬೇಕೆಂದು ಖಾಸಗಿ ಶಾಲಾ ಆಡಳಿತ ಮಂಡಳಿತ ಕಟ್ಟುನಿಟ್ಟಾಗಿ ಸೂಚಿಸುತ್ತಿವೆ. ತಮ್ಮ ಶಾಲೆಯಲ್ಲಿ ಯಾವೊಬ್ಬ ವಿದ್ಯಾರ್ಥಿಗಳು ಅನುತ್ತೀರ್ಣನಾಗಬಾರದು ಎಂದು ಷರತ್ತು ಹಾಕುತ್ತಿದ್ದಾರೆ. ಹೀಗಾಗಿ 9ನೇ ತರಗತಿ ತೇರ್ಗಡೆಯಾಗಿ 10ನೇ ತರಗತಿಗೆ ಬರುವವರಲ್ಲಿ ತೇರ್ಗಡೆಯಾಗುವ ಸಾಮರ್ಥ್ಯವಿಲ್ಲದ ವಿದ್ಯಾರ್ಥಿಗಳನ್ನು ಗುರುತಿಸಿ, ವರ್ಗಾವಣೆ ಪತ್ರ (ಟೀಸಿ) ಕೊಟ್ಟು ಕಳುಹಿಸುತ್ತಾರೆ. ಅವರು ಮತ್ತೊಂದು ಶಾಲೆಗೆ ಪ್ರವೇಶ ಪಡೆಯಬೇಕು, ಇಲ್ಲವೇ ಶಿಕ್ಷಣದಿಂದ ವಂಚಿತರಾಗಬೇಕಿದೆ. ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಟೀಸಿ ಕೊಡಲಾಗಿದೆ.

200+ ಮಕ್ಕಳು ಶಾಲೆಯಿಂದ ಹೊರಕ್ಕೆ:ಕೊಪ್ಪಳ ಜಿಲ್ಲೆಯ ಪ್ರತಿಷ್ಠಿತ 50ಕ್ಕೂ ಅಧಿಕ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿವೆ. ಹೀಗೇ ಬಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದು ಶಿಕ್ಷಣ ಮುಂದುವರಿಸಿದ್ದಾರೆ. ಉಳಿದ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ ಆತಂಕವಿದೆ. ಕೊಪ್ಪಳ ತಾಲೂಕಿನ ಮುನಿರಾಬಾದಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ 20 ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ‘ಜಾಣರಲ್ಲ’ ಎಂದು 8 ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ.

ಮಕ್ಕಳಲ್ಲಿ ಖಿನ್ನತೆ:

ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ಧಾರ ಮಕ್ಕಳು ಹಾಗೂ ಪಾಲಕರ ನಡುವೆ ಕಂದಕ ಏರ್ಪಡಿಸಿವೆ. ಪಾಲಕರು ನಿಮ್ಮ ಮಗ ಜಾಣನಿಲ್ಲ. ಹೀಗಾಗಿ ಟೀಸಿ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಮಕ್ಕಳನ್ನು ಬೈಯುತ್ತಿದ್ದಾರೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. 1ರಿಂದ 9ನೇ ತರಗತಿ ವರೆಗೆ ಸುಮ್ಮನಿದ್ದು, ಇದೀಗ ತನ್ನ ಸಂಸ್ಥೆಯ ಪ್ರತಿಷ್ಠೆ ಕಾಪಾಡಲು ಈ ರೀತಿ ಮಕ್ಕಳು ಹೊರಹಾಕುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವೆಬ್ ಕಾಸ್ಟಿಂಗ್ ಪರಿಣಾಮ:

ಎಸ್‌ಎಸ್‌ಎಲ್‌ಸಿಯಲ್ಲಿ ಬೋಗಸ್ ಪರೀಕ್ಷೆ ನಡೆಸಿ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದ ಸಂಸ್ಥೆಗಳಿಗೆ ವೆಬ್‌ ಕಾಸ್ಟಿಂಗ್‌ ಪರಿಣಾಮದಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ. ಇದರಿಂದ ತಮ್ಮ ಸಂಸ್ಥೆಗೆ ಪೆಟ್ಟು ಬೀಳಲಿದೆ ಎಂದು ಫೇಲಾಗುವ ಮಕ್ಕಳನ್ನು ಶಾಲೆಯಿಂದ ಹೊರ ಹಾಕುತ್ತಿವೆ.

10ನೇ ತರಗತಿಯಲ್ಲಿ ಫೇಲಾಗುವ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹೊರಹಾಕುತ್ತಿವೆ. ಹೀಗಾಗಿ ನೂರಾರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

-ಶ್ರೀಶೈಲ ಬಿರಾದಾರ, ಡಿಡಿಪಿಐ, ಕೊಪ್ಪಳನಮ್ಮ ಮಗ ಜಾಣನಿಲ್ಲ ಎಂದು ಹೇಳಿ ಶಾಲೆಯಿಂದ ಹೊರಹಾಕಿದ್ದಾರೆ. ಇದೀಗ ನಾವು ಮಗನ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ಶಾಲೆಗೆ ಸೇರಿಸಬೇಕು. ಶಿಕ್ಷಣ ಸಂಸ್ಥೆಗಳ ನಿರ್ಧಾರದಿಂದ ಘಾಸಿಗೊಂಡಿರುವ ಮಗ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ.

-ಹೆಸರು ಹೇಳದ ಪಾಲಕ

PREV
Read more Articles on