ರಸ್ತೆಗಳು ಹದಗೆಟ್ಟಿವೆ, ಜೋಪಾನ
ಹದಗೆಟ್ಟ ರಸ್ತೆಗಳಿಂದ ನಗರಕ್ಕೆ ಸ್ವಾಗತ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಹೌದು, ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹದಗೆಟ್ಟ ರಸ್ತೆಗಳು ಸ್ವಾಗತಿಸುತ್ತಿವೆ. ಕೊಪ್ಪಳ ಪ್ರವೇಶ ಮಾಡುವ ಅಷ್ಟೂ ರಸ್ತೆಗಳು ಹದಗೆಟ್ಟು ಹಳ್ಳಹಿಡಿದಿವೆ. ಆದರೂ ಇವುಗಳನ್ನು ದುರಸ್ತಿ ಮಾಡಲು ಯಾರೂ ತಯಾರಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಾ ಸಾಗಿ ಬಂದು, ರಸ್ತೆಯ ಗುಣಗಾನ ಮಾಡುವಂತೆ ಇರುತ್ತದೆ. ಆದರೆ, ಕೊಪ್ಪಳ ಸಮೀಪಿಸುತ್ತಿದ್ದಂತೆ ಬೈಪಾಸ್ ರಸ್ತೆಯಲ್ಲಿ ಹೆದ್ದಾರಿ ಸಾಗುತ್ತದೆ. ಅಲ್ಲಿಂದ ನಗರ ಪ್ರವೇಶ ಮಾಡುವ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ.
ನಮ್ಮದಲ್ಲ ರಸ್ತೆ:
ಹೀಗಾಗಿ, ರಸ್ತೆ ದುರಸ್ತಿ ಮರೀಚಿಕೆಯಾಗಿದೆ. ಕೊಪ್ಪಳ ಪ್ರವೇಶ ಮಾಡುವ ವೇಳೆಯಲ್ಲಿ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಕುಣಿದಾಡುತ್ತಾ ವಾಹನಗಳು ಬರುವಂತೆ ಆಗಿದೆ. ಅದರಲ್ಲೂ ಮಳೆಗಾಲದಿಂದ ರಸ್ತೆ ಇನ್ನಷ್ಟು ಹದಗೆಟ್ಟು ಹೋಗಿದ್ದು, ಸಂಚಾರ ಮಾಡುವವರು ಸರ್ಕಸ್ ಮಾಡಬೇಕಾಗಿದೆ.
ಪದೇ ಪದೇ ಅಪಘಾತಗಳು ಆಗಲಾರಂಭಿಸಿವೆ. ಕಳೆದ ವಾರದಲ್ಲಿಯೇ ನಾಲ್ಕು ಅಪಘಾತ ಸಂಭವಿಸಿದೆ. ಅದರಲ್ಲೂ ಬೈಕ್ ಸವಾರರು ಯಾತನೆ ಅನುಭವಿಸುವಂತೆ ಆಗಿದೆ. ಗುಂಡಿಬಿದ್ದ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಲು ವಾಹನಗಳು ಅಡ್ಡಾದಿಡ್ಡಿ ಸಂಚಾರ ಮಾಡುತ್ತವೆ. ಹೀಗಾಗಿಯೇ ಅಪಘಾತಗಳು ನಡೆಯುತ್ತವೆ. ಅದರಲ್ಲೂ ಕೊಪ್ಪಳಕ್ಕೆ ಮೊದಲ ಬಾರಿಗೆ ಬರುವವರು ಈ ಹದಗೆಟ್ಟ ರಸ್ತೆಯ ಮಾಹಿತಿ ಇಲ್ಲದೇ ಹಾಗೆ ಬರುತ್ತಿದ್ದಂತೆ ಗುಂಡಿಗಳನ್ನು ನೋಡಿ ಗಾಬರಿಯಾಗುತ್ತಾರೆ.ರಸ್ತೆ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅದನ್ನು ಅಗಲೀಕರಣ ಮಾಡಿ, ನಿರ್ಮಾಣ ಮಾಡಬೇಕಾಗಿದೆ. ಹೀಗಾಗಿ, ಸ್ವಾಧೀನ ಪ್ರಕ್ರಿಯೇ ಆಗಬೇಕಾಗಿರುವುದರಿಂದ ವಿಳಂಬವಾಗಿದೆ. ತಾತ್ಕಾಲಿಕ ದುರಸ್ತಿಗೆ ಹೇಳಿದ್ದು, ಮಾಡುತ್ತಾರೆ ಎನ್ನುತ್ತಾರೆ ಶಾಸಕ ರಾಘವೇಂದ್ರ ಹಿಟ್ನಾಳ.
ಕೊಪ್ಪಳ ಪ್ರವೇಶ ಮಾಡುವ ರಸ್ತೆ ಎರಡು ಬದಿಯಲ್ಲಿ ಹದಗೆಟ್ಟು ಹೋಗಿದ್ದು, ಅನೇಕ ಅಪಘಾತ ಆಗುತ್ತಿವೆ. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಯವರು ರಸ್ತೆ ನಮ್ಮದಲ್ಲ ಎನ್ನುತ್ತಾರೆ. ಹಾಗಾದರೇ ಯಾರು ದುರಸ್ತಿ ಮಾಡಬೇಕು.? ಸಂಬಂಧಪಟ್ಟವರು ಶೀಘ್ರ ಗಮನ ಹರಿಸಬೇಕಾಗಿದೆ ಜಿಲ್ಲಾಧ್ಯಕ್ಷ ಜೆಡಿಎಸ್ ಸುರೇಶ ಭೂಮರಡ್ಡಿ ಹೇಳಿದ್ದಾರೆ.