ಕೊರಟಗೆರೆ ನಾಡ ಕಚೇರೀಲಿ ನೀರು ಸೋರಿಕೆ: ಸಾರ್ವಜನಿಕರ ದೂರು

KannadaprabhaNewsNetwork |  
Published : Oct 17, 2024, 12:53 AM IST
ನಾಡ ಕಚೇರಿ ಒಳಗೆ ನೀರು ಸಾರ್ವಜನಿಕರ ಕೆಲಸಗಳು ವಿಳಂಬ | Kannada Prabha

ಸಾರಾಂಶ

ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊರಟಗೆರೆಯ ಹೊಳವನಹಳ್ಳಿ ಗ್ರಾಮದ ನಾಡ ಕಚೇರಿ ಒಳಗೆ ನೀರು ಸೋರುತ್ತಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮೂರು ದಿನದಿಂದ ಸುರಿಯುತ್ತಿರುವ ಮಳೆ ಪರಿಣಾಮ । ಕಚೇರಿ ಒಳಗೆ ನಿಲ್ಲುತ್ತಿರುವ ನೀರು

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಳವನಹಳ್ಳಿ ಗ್ರಾಮದ ನಾಡ ಕಚೇರಿ ಒಳಗೆ ನೀರು ಸೋರುತ್ತಿದ್ದು, ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿರುವ ನಾಡಕಚೇರಿ ಹಾಗೂ ಕಂದಾಯ ಅಧಿಕಾರಿಗಳ ಕಚೇರಿ ಸಂಪೂರ್ಣ ನೀರು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಎರಡು ಇಲಾಖೆಯ ಕಟ್ಟಡಗಳು ಸಂಪೂರ್ಣ ಶಿಥಿಲವಾಗಿದ್ದು, ಮಳೆ ಬಂದರೆ ಸಾಕು ಕಚೇರಿಯ ಒಳಗೆ ನೀರು ನಿಲ್ಲುತ್ತಿದೆ. ಅನೇಕ ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದಾಗ ಕಟ್ಟಡದ ಹಲವೆಡೆ ಸೋರಲಿದೆ. ಕಚೇರಿಯ ಸಿಬ್ಬಂದಿ ಮಳೆ ಬಂದಾಗ ದಾಖಲೆಗಳನ್ನು ಸಂರಕ್ಷಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಾಡಕಚೇರಿ ಆರೋಗ್ಯ ಇಲಾಖೆಗೆ ಸೇರಿದ್ದು, ಹೋಬಳಿ ಕೇಂದ್ರದಲ್ಲಿರುವ ನಾಡ ಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಈ ಕಟ್ಟಡ ೬೦ ವರ್ಷಕ್ಕೂ ಹಳೆಯ ಕಟ್ಟಡವಾಗಿದ್ದು, ಯಾವಾಗ ಬೀಳುತ್ತದೆಯೋ ಎನ್ನವ ಆತಂಕದಲ್ಲಿ ಇಲ್ಲಿನ ಸಿಬ್ಬಂದಿ ಜೀವ ಕೈಯಲ್ಲಿ ಇಟ್ಟಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ.

ಸ್ಥಳೀಯರಾದ ಪುಟ್ಟಪ್ಪಯ್ಯ ಮಾತನಾಡಿ, ಈ ಕಟ್ಟಡ ಸಾಕಷ್ಟು ಹಳೆಯ ಕಟ್ಟಡವಾಗಿದ್ದು, ಮಳೆ ಬಂದಾಗ ಕಟ್ಟಡ ಶಿಥಿಲಗೊಂಡು ಕಚೇರಿಯ ಒಳಗೆ ನೀರು ನಿಲ್ಲುತ್ತದೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ನೀಡಲಾಗಿದ್ದು, ಯಾರೂ ಕೂಡ ಇತ್ತ ತಿರುಗಿ ನೋಡುತ್ತಿಲ್ಲ. ನಾಡ ಕಚೇರಿಗೆ ಸ್ವಂತ ಕಟ್ಟಡ ಇಲ್ಲ, ತಕ್ಷಣ ಅಧಿಕಾರಿಗಳು ಸ್ವಂತ ಕಟ್ಟಡ ಮಾಡಿ ಕೊಟ್ಟ ಈ ಭಾಗ ಸಾರ್ವಜನಿಕರಿಗೆ ಸಮಸ್ಯೆ ಬಗೆಹರಿಸಿ ಎಂದು ಹೇಳಿದರು.

ಗ್ರಾಮಸ್ಥ ಮುಜಾಹಿದ್ ಅಲಿ ಮಾತನಾಡಿ, ನಮ್ಮ ಊರಿನ ನಾಡ ಕಚೇರಿ ಮಳೆ ಬಂದರೆ ಸಾಕು ಕಚೇರಿ ಒಳಗೆ ನೀರು ನಿಂತು ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಕಚೇರಿ ಒಳಗೆ ಇರುವ ಪೀಠೋಪಕರಣಗಳು ಮಳೆಯ ನೀರಿಗೆ ನೆಂದು ಹೋಗಿವೆ, ಅವುಗಳನ್ನು ರಕ್ಷಿಸಲು ಸಿಬ್ಬಂದಿ ಟಾರ್ಪಲ್ ಹಾಕಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ, ಜಿಲ್ಲಾಧಿಕಾರಿಗಳು ತಕ್ಷಣ ನಮ್ಮ ನಾಡ ಕಚೇರಿಯನ್ನ ಸ್ಥಳಾಂತರಿಸಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಹೊಳವನಹಳ್ಳಿ ನಾಡಕಚೇರಿ ಹಳೆಯ ಕಟ್ಟಡವಾಗಿದ್ದು, ನಾನು ಸ್ಥಳಕ್ಕೆ ಬೇಟಿ ನೀಡಿದ್ದೇನೆ, ಗೃಹ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, ಅದಷ್ಟು ಬೇಗ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ