ಕನ್ನಡಪ್ರಭ ವಾರ್ತೆ ಕಲಬುರಗಿ
ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠವು ಧಾರ್ಮಿಕ ಸಂಸ್ಕಾರದ ಜೊತೆಗೆ ಜನಮಾನಸದಲ್ಲಿ ವೈಜ್ಞಾನಿಕ ಚಿಂತನೆಯನ್ನು ಬಿತ್ತುತ್ತಿರುವುದು ಸಂತಸದ ಸಂಗತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಶಿವಯೋಗಿಗಳ ನಾಲವಾರ ಜಾತ್ರೆ -2024 ಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಬಸವಾದಿ ಶರಣರು ನಡೆದಾಡಿದ ಪುಣ್ಯಭೂಮಿ,ಈ ನೆಲದಲ್ಲಿ ಕಾಯಕ, ದಾಸೋಹ, ಸಮಾನತೆ, ತತ್ವಗಳನ್ನು ಒಂಬೈನೂರು ವರ್ಷಗಳ ಹಿಂದೆಯೇ ಪ್ರತಿಪಾದಿಸಲಾಗಿತ್ತು. ಈಗ ನಾಲವಾರದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಮಠದ ಮೂಲಕ ಧಾರ್ಮಿಕ ಅಂಧಶ್ರದ್ಧೆಯನ್ನು ಬೆಳೆಸದೇ,ಬರುವ ಭಕ್ತರಿಗೆ ಅನ್ನ,ಅಕ್ಷರ,ಆಶ್ರಯ ನೀಡಿ,ಅವರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಾ ಬರುತ್ತಿರುವುದು ಸಂತಸ ತಂದಿದೆ ಎಂದರು.ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬೇಕಾದ ಸಂದರ್ಭದಲ್ಲಿ ಅನೇಕ ಬಾರಿ ನಾನು ಖುದ್ದಾಗಿ, ಅಥವಾ ದೂರವಾಣಿ ಮೂಲಕ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳಿಂದ ಮಾರ್ಗದರ್ಶನ ಪಡೆಯುತ್ತಾ ಬಂದಿದ್ದೇನೆಂದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಬಸವ ತತ್ವದ ಹಾದಿಯಲ್ಲಿ ನಡೆಯುವ ಮೂಲಕ ನಾಲವಾರ ಶ್ರೀಮಠ ಇತರ ಮಠಗಳಿಗೆ ಮಾದರಿಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಸ್ವಾಮೀಜಿ ಮಾತನಾಡಿ, ಜಾತ್ರೆ ಎಂದರೆ ಅದು ಮನರಂಜನೆಯ, ಅಥವಾ ಧಾರ್ಮಿಕ ಕಾರ್ಯಕ್ರಮ ಮಾತ್ರ ಆಗದೇ ಜನಮನದ ಜ್ಞಾನವನ್ನು ಹೆಚ್ಚಿಸುವ, ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೌರಭ ಸೂಸುವ ಜನಮಾನಸದ ಹಬ್ಬ ವಾಗಬೇಕು ಎನ್ನುವ ಸಂಕಲ್ಪದೊಂದಿಗೆ ನಾವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿಗೆ ಪಾತ್ರರಾದ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೆವರನ್ನು ಸತ್ಕರಿಸಲಾಯ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಸಾಹು ಗೋಗಿ, ಡಾ.ತೋಟೇಂದ್ರ ವರ್ತೂರ, ಮಹಾದೇವ ಗಂವ್ಹಾರ, ನಾಗಲಿಂಗಯ್ಯ ಮಠಪತಿ ಇದ್ದರು.