ಕನ್ನಡಪ್ರಭ ವಾರ್ತೆ ಕಲಬುರಗಿ
ದಕ್ಷಿಣ ಭಾರತದ ಮಹಾದೀಪಮೇಳವೆಂದೇ ಪ್ರಖ್ಯಾತವಾದ ನಾಲವಾರದ ತನಾರತಿ ಉತ್ಸವವು ಇಷ್ಟಾರ್ಥಗಳು ಈಡೇರಿದ ಪ್ರಯುಕ್ತ ಕೃತಜ್ಞತೆ ರೂಪದಲ್ಲಿ ಕರ್ತೃ ಕೋರಿಸಿದ್ಧೇಶ್ವರರ ಗದ್ದುಗೆಗೆ ಸಲ್ಲಿಸುವ ಹರಕೆಯಾಗಿದ್ದು ದೇಶದ ವಿವಿಧ ಭಾಗಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡು ಹರಕೆ ತೀರಿಸುತ್ತಾರೆ.
ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ಉಡುಪು ಧರಿಸಿ ಉತ್ಸವದ ನೇತೃತ್ವ ವಹಿಸಿದ್ದರು. ಅವರ ಹಿಂದೆ ಸಾವಿರಾರು ಸದ್ಭಕ್ತರು ವಿಶೇಷವಾಗಿ ತಯಾರಿಸಿದ ಹಣತೆ ತಲೆಯ ಮೇಲೆ ಹೊತ್ತುಕೊಂಡು ಮಠದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದರು. ಪುರವಂತಿಕೆ, ಪೂರ್ಣಕುಂಭ, ಭಾಜಾ-ಭಜಂತ್ರಿ, ವೈದಿಕರ ವೇದಘೋಷಗಳ ಮಧ್ಯೆ ನಡೆದ ಈ ಉತ್ಸವ ಮಧ್ಯರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದ ವರೆಗೂ ನಡೆಯಿತು.ಮಧ್ಯರಾತ್ರಿ ಸ್ನಾನಾದಿ ಪೂರೈಸಿಕೊಂಡು, ಗದ್ದುಗೆಗೆ ನಮಿಸಿ, ಗೋದಿಹಿಟ್ಟಿನಿಂದ ವಿಶೇಷ ಪ್ರಣತೆ ತಯಾರಿಸಿ ಅದರಲ್ಲಿ ಜ್ಯೋತಿ ಪ್ರಜ್ವಲಿಸಿ ಮಹಾಗುರುವಿಗೆ ಬೆಳಗಿ ಭಕ್ತರು ಧನ್ಯತೆ ಅನುಭವಿಸಿದರು.
ಭಕ್ತರು ಬೇಡಿಕೊಂಡ ಇಷ್ಟಾರ್ಥಗಳು ಈಡೇರಿದ ನಂತರ ತನಾರತಿ ಹರಕೆ ಸಲ್ಲಿಸುವ ಪರಂಪರೆ ಕಳೆದ ಮೂರು ಶತಮಾನಗಳಿಂದಲೂ ಶ್ರೀಮಠದಲ್ಲಿ ನಡೆಯುತ್ತಾ ಬಂದಿದ್ದು ನಾಲವಾರ ಶ್ರೀಮಠದ ಪಾರಂಪರಿಕ ಉತ್ಸವವಾಗಿದೆ. ತನಾರತಿ ಸಂದರ್ಭದಲ್ಲಿ ದೀಪಗಳ ಸಾಲು ನದಿಯ ರೀತಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತದೆ.